ಈಜಿಪ್ಟ್ ಚರ್ಚ್ ದಾಳಿ; ನಾಲ್ಕು ಜನರ ಹತ್ಯೆ ಮಾಡಿದ ಶಸ್ತ್ರಧಾರಿ ಗುಂಡೇಟಿಗೆ ಬಲಿ

ಕೈರೊ, ಡಿ.29: ಶುಕ್ರವಾರದಂದು ಬಂದೂಕುಧಾರಿಯೊಬ್ಬ ದಕ್ಷಿಣ ಕೈರೊದಲ್ಲಿರುವ ಚರ್ಚ್ ಮೇಲೆ ದಾಳಿ ನಡೆಸಿ ನಾಲ್ಕು ಮಂದಿಯನ್ನು ಹತ್ಯೆ ಮಾಡಿದ್ದು ನಂತರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಗುಂಡೇಟಿಗೆ ಬಲಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹತ್ಯೆಗೀಡಾದವರ ಪೈಕಿ ಒಬ್ಬರು ಪೊಲೀಸ್ ಅಧಿಕಾರಿಯೂ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಗೂ ಮೊದಲು ಬಂದೂಕುಧಾರಿಯು ಚರ್ಚ್ ಹೊರಗೆ ನಿಯೋಜಿಸಲಾಗಿದ್ದ ಐದು ಭದ್ರತಾ ಸಿಬ್ಬಂದಿಯನ್ನು ಗಾಯಗೊಳಿಸಿದ್ದು ನಂತರ ಚರ್ಚ್ ಕಟ್ಟಡದ ಒಳಗೆ ಪ್ರವೇಶಿಸಲು ಯತ್ನಿಸಿದಾಗ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ದಾಳಿಯಲ್ಲಿ ಇಬ್ಬರು ಬಂದೂಕುಧಾರಿಗಳು ಇರುವ ಸಾಧ್ಯತೆಯಿದ್ದು ತಪ್ಪಿಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ.
ಈಜಿಪ್ಟ್‌ನಲ್ಲಿರುವ ಇಸ್ಲಾಮಿಕ್ ಸ್ಟೇಟ್ಟ್‌ನ ವಿಭಾಗವು ಅಲ್ಲಿ ಹಲವಾರು ಬಾರಿ ಚರ್ಚ್‌ಗಳ ಮೇಲೆ ದಾಳಿ ನಡೆಸಿ ಮತ್ತು ಗುಂಡು ಹಾರಿಸಿ ನೂರಾರು ಕ್ರೈಸ್ತರನ್ನು ಹತ್ಯೆ ಮಾಡಿದೆ. ಜೊತೆಗೆ ಅಲ್ಪಸಂಖ್ಯಾತ ಸಮುದಾಯದ ಮೇಲೆ ದಾಳಿಯನ್ನು ಮುಂದುವರಿಸುವ ಎಚ್ಚರಿಕೆ ನೀಡಿದೆ.
2016ರಲ್ಲಿ ಐಸಿಸ್ ಕೈರೊದಲ್ಲಿರುವ ಚರ್ಚ್‌ವೊಂದರ ಮೇಲೆ ಆತ್ಮಹತ್ಯಾ ದಾಳಿ ನಡೆಸಿತ್ತು ನಂತರ ರಾಜಧಾನಿಯ ಉತ್ತರದಲ್ಲಿರುವ ಎರಡು ಚರ್ಚ್‌ಗಳ ಮೇಲೆ ಬಾಂಬ್ ದಾಳಿ ನಡೆಸಿತ್ತು. ಕೈರೊದಲ್ಲಿ ದೇವಾಲಯವೊಂದಕ್ಕೆ ಪ್ರಯಾಣಿಸುತ್ತಿದ್ದ ಮೂವತ್ತು ಕ್ರೈಸ್ತರನ್ನು ಐಸಿಸ್ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದ.
ಈಜಿಪ್ಟ್‌ನ 93 ಮಿಲಿಯನ್ ಜನಸಂಖ್ಯೆಯಲ್ಲಿ ಕ್ರೈಸ್ತರ ಪಾಲು ಕೇವಲ ಶೇಕಡಾ ಹತ್ತಾಗಿದ್ದು ಅಲ್ಲಿ ಅವರೇ ಪ್ರಮುಖ ಧಾರ್ಮಿಕ ಅಲ್ಪಸಂಖ್ಯಾತರಾಗಿದ್ದಾರೆ.







