ಮೂಡುಬಿದಿರೆಯ ಪ್ರಿಯಾಂಕಾ ಜೈಲಿನಿಂದ ಬಿಡುಗಡೆ

ಮಂಗಳೂರು, ಡಿ. 29: ಆಹಾರದಲ್ಲಿ ಅಮಲು ವಸ್ತು ಹಾಕಿ ಮನೆಯವರಿಗೆ ನೀಡಿದ್ದ ಆರೋಪದಲ್ಲಿ ಬಂಧಿತರಾಗಿ ಜೈಲು ಸೇರಿದ್ದ ಮೂಡುಬಿದಿರೆ ದರೆಗುಡ್ಡೆಯ ನಿವಾಸಿ ಪ್ರಿಯಾಂಕಾ ಶುಕ್ರವಾರ ಸಂಜೆ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.
ಜೈಲಿನಿಂದ ಹೊರ ಬರುತ್ತಿದ್ದಂತೆ ಮನೆಯವರನ್ನು ಕಂಡ ಪ್ರಿಯಾಂಕಾ ಅವರೊಂದಿಗೆ ಮನೆಗೆ ಹೋಗಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಪ್ರಿಯಾಂಕಾ ಜೈಲ್‌ನ ಗೇಟ್ ಬಳಿ ನಿಂತಿದ್ದು, ಸಿಬ್ಬಂದಿಯವರು ಆಕೆಯನ್ನು ತೆರಳುವಂತೆ ಸೂಚಿಸಿದ್ದಾರೆ. ಮನೆಗೆ ಹೋಗಲು ನಿರಾಕರಿಸಿದ್ದರೂ ಮನೆಯವರು ಪ್ರಿಯಾಂಕಾರನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಿಯಾಂಕಾರ ಮದುವೆ ಡಿ.11ರಂದು ನಿಗದಿಯಾಗಿದ್ದು, ಡಿ.9ರಂದು ಮೆಹಂದಿ ಕಾರ್ಯಕ್ರಮವಿತ್ತು. ಆದರೆ ಡಿ. 8ರಂದು ರಾತ್ರಿ ಮನೆಯವರು ಊಟ ಮಾಡಿ ಮಲಗಿದ್ದ ವೇಳೆ ಪ್ರಿಯಾಂಕಾ ನಾಪತ್ತೆಯಾಗಿದ್ದರು. ಡಿ. 9ರಂದು ಮನೆಯಿಂದ ಪ್ರಿಯಾಂಕ ಚಿನ್ನಾಭರಣ ಹಾಗೂ ಬಟ್ಟೆ ಬರೆಗಳೊಂದಿಗೆ ನಾಪತ್ತೆಯಾಗಿದ್ದ ಬಗ್ಗೆ ದೂರು ದಾಖಲಾಗಿತ್ತು. ಬಳಿಕ ಪಣಂಬೂರು ಮತ್ತು ಮೂಡುಬಿದಿರೆ ಪೊಲೀಸರ ತನಿಖಾ ತಂಡವು ಪ್ರಿಯಾಂಕಾ ಮತ್ತಾಕೆಯ ಪ್ರಿಯಕರನನ್ನು ಮುಂಬೈಯಲ್ಲಿ ಪತ್ತೆ ಹಚ್ಚಿ ಮಂಗಳೂರಿಗೆ ಕರೆ ತಂದಿತ್ತು.







