ಬೆಂಗಳೂರು: ಬರಹಗಾರನ ಜೀವನಾನುಭವವೇ ಸಾಹಿತ್ಯದ ಸಾರ; ಡಾ.ದೊಡ್ಡರಂಗೇಗೌಡ
ಬೆಂಗಳೂರು, ಡಿ.29: ಬರಹಗಾರನ ಜೀವನಾನುಭವವೇ ಆತನ ಸಾಹಿತ್ಯದ ಸಾರವಾಗಿರುತ್ತದೆ. ಹೀಗಾಗಿ ಬರಹಗಾರ ತನ್ನ ಬರವಣಿಗೆಯನ್ನು ಸೃಜನಾತ್ಮಕವಾಗಿ ರೂಪಿಸಿಕೊಳ್ಳಬೇಕಾದರೆ ತನ್ನ ಸುತ್ತಮುತ್ತಲಿನ ಪ್ರತಿಯೊಂದು ಸನ್ನಿವೇಶಗಳನ್ನು ಸೂಕ್ಷ್ಮವಾಗಿ ಗ್ರಹಿಸುವಂತಹ, ಆ ಕುರಿತು ಚಿಂತಿಸುವಂತಹ ಧ್ಯಾನಸ್ಥ ಸ್ಥಿತಿಯನ್ನು ಮೈಗೂಡಿಸಿಕೊಳ್ಳಬೇಕೆಂದು ಹಿರಿಯ ಚಿತ್ರ ಸಾಹಿತಿ ಡಾ.ದೊಡ್ಡರಂಗೇಗೌಡ ಅಭಿಪ್ರಾಯಿಸಿದ್ದಾರೆ.
ಶುಕ್ರವಾರ ಕನ್ನಡ ಪುಸ್ತಕ ಪ್ರಾಧಿಕಾರ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಯುವ ಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ ಹಾಗೂ ಶಾಲಾ ಕಾಲೇಜುಗಳಿಗೆ ಉಚಿತ ಪುಸ್ತಕ ವಿತಾರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾನೊಬ್ಬ ಕವಿ, ಕತೆಗಾರನಾಗಲೇಬೇಕೆಂದು ಪಟ್ಟಾಗಿ ಕುಳಿತು ಬರೆದರೆ ಬರವಣಿಗೆ ಸಿದ್ಧಿಸುವುದಿಲ್ಲ. ಬರವಣಿಗೆ ಎನ್ನುವುದು ಮಗುವಿನ ಸ್ವಚ್ಛಂದ ನಗುವಿನಂತೆ, ಆಕಾಶದಲ್ಲಿ ಹಾರುವ ಹಕ್ಕಿಯಂತೆ ತಾನಾಗಿ ಮೂಡಿ ಬರಬೇಕು. ಅಂತಹ ವ್ಯಕ್ತಿತ್ವವನ್ನು ಬರಹಗಾರ ರೂಪಿಸಿಕೊಳ್ಳಲು ಪ್ರಕೃತಿಯೊಡನೆ, ತನ್ನ ಸುತ್ತಮುತ್ತಲಿನ ಜನರೊಂದಿಗೆ ಸ್ವಚ್ಛಂದವಾಗಿ ಬೆರೆಯಬೇಕು ಎಂದು ಅವರು ಹೇಳಿದರು.
ಪ್ರತಿಯೊಬ್ಬರ ಜೀವನದಲ್ಲೂ ಕುತೂಹಲ ಇದ್ದರೆ ಮಾತ್ರ ಆತನ ಬದುಕು ಜೀವಂತವಾಗಿರಲು ಸಾಧ್ಯ. ಆತ ವಿಜ್ಞಾನಿ, ವೈದ್ಯ ಹಾಗೂ ಸಾಹಿತಿ ಯಾರೇ ಆಗಿರಲಿ ಕುತೂಹಲ ಮನಸ್ಥಿತಿ ಇದ್ದರೆ ಮಾತ್ರ ಹೊಸ ಅವಿಷ್ಕಾರಗಳು ಒಡಮೂಡಲು ಸಾಧ್ಯ. ಕುತೂಹಲ ಇಲ್ಲದಿದ್ದರೆ ಬರಹಗಾರ ಹುಟ್ಟಲು ಸಾಧ್ಯವೇ ಇಲ್ಲವೆಂದು ಅವರು ಹೇಳಿದರು.
ಕುವೆಂಪು ಸಾಹಿತ್ಯ ದಾರಿದೀಪ: ‘ಆಡು ಮುಟ್ಟದ ಸೊಪ್ಪಿಲ್ಲ’ ಎಂಬ ಗಾದೆಗೆ ಅನ್ವರ್ಥವಾಗಿ ಕುವೆಂಪು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಬೆಳಗಿದ್ದಾರೆ. ಅದು ಕಾವ್ಯವಾಗಲಿ, ಕಾದಂಬರಿಯಾಗಲಿ, ನಾಟಕವಾಗಲಿ ಎಲ್ಲವನ್ನು ಅತ್ಯುತ್ತಮವಾದುದ್ದನ್ನೇ ನೀಡಿದ್ದಾರೆ. ಅವರ ಸಾಹಿತ್ಯ ಪ್ರಕಾರಗಳು ಯುವ ಸಾಹಿತಿಗಳಿಗೆ ದಾರಿ ದೀಪವಾಗಲಿ ಎಂದು ಅವರು ಆಶಿಸಿದರು.
ಹಿರಿಯ ಕತೆಗಾರ ಅಮರೇಶ ನುಗಡೋಣಿ ಮಾತನಾಡಿ, ಕನ್ನಡದ ಕಾವ್ಯ ಪರಂಪರೆ ಶ್ರೀಮಂತವಾಗಿದೆ. ಆದರೆ, ಅದನ್ನು ಮುಂದುವರೆಸಿಕೊಂಡು ಹೋಗಲು ಯುವ ತಲೆಮಾರಿಗೆ ಆಸಕ್ತಿ ಇಲ್ಲವಾಗಿದೆ. ವಿವಿಗಳಲ್ಲಿ ಸಂಶೋಧನಾ ವಿಷಯವಾಗಿ ಕಾವ್ಯವನ್ನು ಒಂದು ವಿಷಯವಾಗಿ ತೆಗೆದುಕೊಳ್ಳಲು ಹಿಂಜರಿಯುತ್ತಾರೆ. ಇಂತಹ ಮನಸ್ಥಿತಿ ಹೋಗಲಾಡಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ಬರಹಗಾರರು ತಮ್ಮ ಬರವಣಿಗೆಗೆ ಬೇಕಾದ ವಸ್ತು-ವಿಷಯವನ್ನು ತಮ್ಮದೇ ಕುಟುಂಬದ, ಜಾತಿಯ, ಊರಿನ ಅನುಭವವನ್ನು ಸೂಕ್ಷ್ಮವಾಗಿ ಅರಿಯುವ ಮೂಲಕ ಪಡೆಯಬೇಕು. ನಂತರದಲ್ಲಿ ಪಂಪ, ರನ್ನ, ಕುಮಾರವ್ಯಾಸ, ಶರಣ ಸಾಹಿತ್ಯ, ತತ್ವಪದಕಾರರು ಹಾಗೂ ಕುವೆಂಪುರವರನ್ನು ಒಳಗೊಂಡಂತೆ ಹಿರಿಯ ಸಾಹಿತಿಗಳ ಕೃತಿಗಳನ್ನು ಓದುವುದರ ಮೂಲಕ ತಮ್ಮ ಬರವಣಿಗೆಗೆ ನಿರ್ದಿಷ್ಟವಾದ ದೃಷ್ಟಿಕೋನವನ್ನು ಕಂಡುಕೊಳ್ಳಬೇಕೆಂದು ಅವರು ಆಶಿಸಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ವಸುಂಧರಾ ಭೂಪತಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸಾಹಿತ್ಯಾಭಿರುಚಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ‘ಜಾಣ-ಜಾಣೆಯರ ಬಳಗ ಎಂಬ ಹೊಸ ಯೋಜನೆ’ಯನ್ನು ಜಾರಿ ಮಾಡಲಾಗಿದೆ. ಈ ಬಳಗವನ್ನು ಶಾಲಾ-ಕಾಲೇಜುಗಳಲ್ಲಿ ಸ್ಥಾಪಿಸಿ, ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿದರೆ ಅಕಾಡೆಮಿ ವತಿಯಿಂದ ಪ್ರೋತ್ಸಾಹ ಧನ ನೀಡಲಾಗುತ್ತದೆ. ಈ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಶಿಕ್ಷಕರು ಹೆಚ್ಚಿನ ಆಸಕ್ತಿ ತೋರಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಯುವ ಬರಹಗಾರರ 37 ಕೃತಿಗಳನ್ನು ಬಿಡಗಡೆಗೊಳಿಸಲಾಯಿತು. ಈ ವೇಳೆ ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಸೌಭಾಗ್ಯ ಉಪಸ್ಥಿತರಿದ್ದರು.
ಕನ್ನಡ ನಾಡಲ್ಲಿ ಹುಟ್ಟಿದವರು ಕನ್ನಡದಲ್ಲೆ ಸಹಿ ಮಾಡುವುದನ್ನು ರೂಢಿಸಿಕೊಳ್ಳಬೇಕು. ಅದನ್ನು ಆಂದೋಲನವನ್ನಾಗಿ ರೂಪಿಸಬೇಕಾಗಿದೆ. ಸಹಿ ಮಾಡುವುದು ನಾಡಿನ ಜನತೆ ‘ಕನ್ನಡದ ಅಸ್ಮಿತೆ’ಯ ಪ್ರಶ್ನೆಯಾಗಿ ನೋಡಬೇಕಾಗಿದೆ. ಹೀಗಾಗಿ ನಾನು ವಿದೇಶ ಪ್ರಯಾಣ ಮಾಡುವಾಗ ಹಾಗೂ ಬ್ಯಾಂಕ್ ಸೇರಿದಂತೆ ಎಲ್ಲ ಕಡೆಗಳಲ್ಲೂ ಕನ್ನಡದಲ್ಲೇ ಸಹಿ ಮಾಡುತ್ತೇನೆ. ಇದರಿಂದ ನಾನೊಬ್ಬ ಕನ್ನಡಿಗ ಎಂಬ ಹೆಮ್ಮೆ ಮೂಡುತ್ತದೆ.
-ದೊಡ್ಡರಂಗೇಗೌಡ ಹಿರಿಯ ಕವಿ







