ರಾಜ್ಯದ ನೆಲ, ಜಲದ ವಿಚಾರ ಬಂದಾಗ ಪಕ್ಷ ಬಿಟ್ಟು ಹೋರಾಟಕ್ಕೆ ಸಿದ್ಧ : ಎಚ್.ಡಿ.ದೇವೇಗೌಡ
"ಗೋಯಲ್ ಭೇಟಿ ರಾಜಕೀಯ ದುರುದ್ದೇಶ ಇಲ್ಲ"

ಮೈಸೂರು, ಡಿ.29: ರಾಜ್ಯದ ನೆಲ, ಜಲ ವಿಚಾರ ಬಂದಾಗ ನಾನು ಪಕ್ಷ ನೋಡಿಲ್ಲ. ಪಕ್ಷ ಬೇಧ ಮರೆತು ಹೋರಾಟ ಮಾಡಿದ್ದೇನೆ. ಕಾವೇರಿ ಹೋರಾಟಕ್ಕೆ ಸಿಎಂ ಸಿದ್ದರಾಮಯ್ಯ ಕರೆದಿದ್ದಕ್ಕೆ ನಾನು ಹೋಗಿರಲಿಲ್ಲವೇ. ಈಗಲೂ ಅಷ್ಟೇ, ನಾನು ಪಕ್ಷ ಬಿಟ್ಟು ಹೋರಾಟಕ್ಕೆ ಸಿದ್ಧನಿದ್ದೇನೆ, ಪ್ರಧಾನಿ ಭೇಟಿ ಮಾಡಲೂ ಕೂಡ ಸಿದ್ಧನಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಮೈಸೂರು ಮಂಡಕಳ್ಳಿ ವಿಮಾನನಿಲ್ದಾಣದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 1962ರಲ್ಲಿ ನಾನು ಚುನಾವಣೆ ಗೆದ್ದಿದ್ದು ದೇವರ ಆಶೀರ್ವಾದಿಂದಲೇ. ನನಗೆ ದೇವರಲ್ಲಿ ಅಪಾರ ನಂಬಿಕೆ ಇದೆ. ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ್ದ ಹೋರಾಟ ಮಾಡಲು ಇರೋ ಶಕ್ತಿಯೇ ದೇವರು. ಈ ಹಿನ್ನೆಲೆಯಲ್ಲಿ ಇಂದು ವೈಕುಂಠ ಏಕಾದಶಿಯ ವಿಶೇಷ ಪೂಜೆ ಕೈಗೊಂಡಿದ್ದೇನೆ. ಆದಿ ರಂಗ, ಮಧ್ಯರಂಗ, ಅಂತ್ಯರಂಗನ ದರ್ಶನ ಪಡೆದು ಪುಣ್ಯಪ್ರಾಪ್ತಿ ಆಗುತ್ತದೆಂಬ ಮಾತಿದೆ. ಈ ಹಿನ್ನೆಲೆಯಲ್ಲಿ ಕುಟುಂಬ ಸಮೇತರಾಗಿ ಮೂರು ದೇವಾಲಯಗಳಿಗೆ ಭೇಟಿ ನೀಡುತ್ತಿದ್ದೇವೆ. ದೇವರ ದರ್ಶನ ಪಡೆದು ಮತ್ತೆ ವಾಪಸ್ ಆಗುತ್ತೇವೆ ಎಂದರು.
ಸಿದ್ದರಾಮಯ್ಯ ವಿರುದ್ಧ ಗರಂ ಆದ ಅವರು, ಸಿಎಂ ಸಿದ್ದರಾಮಯ್ಯ ಪ್ರಜ್ಞೆ ಇಟ್ಟುಕೊಂಡು ಮಾತನಾಡಲಿ. ಡೋಂಗಿ ವ್ಯವಹಾರಗಳನ್ನು ಬಿಟ್ಟು ನನ್ನ ಜೊತೆ ಹೋರಾಟಕ್ಕೆ ಬರಲಿ. ನೀರಾವರಿ ಯೋಜನೆ ಬಗ್ಗೆ ವಾಸ್ತವವಾಗಿ ಮಾತನಾಡಲಿ. ಕೃಷ್ಣ ನದಿಗೆ ಯೋಜನೆಗಳನ್ನು ರೂಪಿಸಿದವರು ಯಾರು? ದೆಹಲಿಗೆ ಹೋಗಿ ನೀರಾವರಿ ಯೋಜನೆಗಳನ್ನು ಜಾರಿ ಮಾಡಿದವರು ಯಾರು ಸಿದ್ದರಾಮಯ್ಯನಾ? ದೇವೇಗೌಡರಾ? ಡೋಂಗಿ ವ್ಯವಹಾರಗಳನ್ನು ಬಿಟ್ಟು ವಾಸ್ತವವಾಗಿ ಮಾತನಾಡಲಿ. ಹೇಳಿಕೆ ನೀಡೋದು ಸುಲಭ. ಆದರೆ ಅದನ್ನು ಅರಗಿಸಿಕೊಳ್ಳುವುದು ಕಷ್ಟ. ನೀರಾವರಿ ಬಗ್ಗೆ ಸಿದ್ದರಾಮಯ್ಯ ಪ್ರಜ್ಞೆ ಇಟ್ಟುಕೊಂಡು ಮಾತನಾಡಲಿ ಎಂದು ಕಿಡಿ ಕಾರಿದರು.
ಚಿತ್ರನಟ ಸುದೀಪ್ ಜೆಡಿಎಸ್ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ನಾನು ಯಾರ ವ್ಯಕ್ತಿತ್ವವನ್ನು ಹಗುರವಾಗಿ ಕಾಣಲ್ಲ. ಅವರೊಂದಿಗೆ ಕುಮಾರಸ್ವಾಮಿ ಮಾತನಾಡಿರೋದು ಸತ್ಯ. ಆದರೆ ಅವರು ಏನು ನಿರ್ಧಾರ ಮಾಡಿದ್ದಾರೋ ಗೊತ್ತಿಲ್ಲ ಎಂದರು.
ಎರಡು ರಾಷ್ಟ್ರೀಯ ಪಕ್ಷಗಳು ಅಬ್ಬರ ಪ್ರಚಾರ ಮಾಡುತ್ತಿದ್ದಾರೆ. ನಾವು ಸಹ ಸುಮ್ಮನೆ ಕುಳಿತಿಲ್ಲ. ಕುಮಾರಸ್ವಾಮಿ ಎಲ್ಲಾ ಕಡೆ ಪ್ರಚಾರ ನಡೆಸುತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳ ವಿರುದ್ಧ ನಮ್ಮ ಹೋರಾಟ ಮುಂದುವರೆಯುತ್ತಲೇ ಇರುತ್ತದೆ. ಯಾರು ಬರಲಿ ಯಾರು ಹೋಗಲಿ. ನಮ್ಮ ಹೋರಾಟವನ್ನು ಯಾರೇ ಅಡ್ಡಪಡಿಸಿದರೂ ಹೋರಾಟ ಮುಂದುವರೆಯುತ್ತದೆ. ಮಾಧ್ಯಮಗಳು ನಮ್ಮ ಬಗ್ಗೆ ಏನೇ ಬರೆದರೂ ಏನೇ ತೋರಿಸಿದರೂ ನನಗೆ ಅಭ್ಯಂತರ ಇಲ್ಲ. ವೈಕುಂಠ ಏಕಾದಶಿ ಪ್ರಯುಕ್ತ ಶ್ರೀರಂಗನಾಥನ ದರ್ಶನಕ್ಕಾಗಿ ಬಂದಿದ್ದೇನೆ. ಬೇರೇನೂ ಹೇಳಲಾರೆ ಎಂದರು.
‘ಗೋಯಲ್ ಭೇಟಿ ರಾಜಕೀಯ ದುರುದ್ದೇಶ ಇಲ್ಲ’
ನನ್ನ ಮತ್ತು ಪಿಯೂಷ್ ಗೋಯಲ್ ಅವರ ಭೇಟಿ ಸೌಜನ್ಯದ ಭೇಟಿಯಾಗಿದೆ. ಹಾಸನದ ರೈಲ್ವೆ ಯೋಜನೆ ವಿಚಾರವಾಗಿ ನಾನು ಅವರನ್ನು ಭೇಟಿ ಮಾಡಿದ್ದ್ದೆ. ನಾನೇ ಅವರಲ್ಲಿಗೆ ಹೋಗಬೇಕಿತ್ತು. ಆದರೆ ವಯಸ್ಸಿನಲ್ಲಿ ದೊಡ್ಡವರು ಅನ್ನೋ ಕಾರಣಕ್ಕೆ ಅವರೇ ನಮ್ಮ ಮನೆಗೆ ಬಂದಿದ್ದರು. ನನ್ನ ಅವರ ಭೇಟಿಯಲ್ಲಿ ಯಾವುದೇ ರಾಜಕೀಯ ದುರುದ್ದೇಶ ಇಲ್ಲ ಎಂದು ಎಚ್.ಡಿ.ದೇವೇಗೌಡ ಸ್ಪಷ್ಟಪಡಿಸಿದರು.







