ಬೆಂಗಳೂರು: 11,500 ವಕೀಲರಿಗೆ ಮಾತ್ರ ಮತ ಚಲಾಯಿಸಲು ಅವಕಾಶ ಕಲ್ಪಿಸಿ; ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ
ಬೆಂಗಳೂರು, ಡಿ.29: ಮುಂದಿನ ವರ್ಷ ನಡೆಯಲಿರುವ ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ ಕರ್ನಾಟಕ ವಕೀಲರ ಪರಿಷತ್‌ನ 11,500 ವಕೀಲರಿಗೆ ಮಾತ್ರ ಮತಚಲಾಯಿಸಲು ಅವಕಾಶ ಕಲ್ಪಿಸಲು ನಿರ್ದೇಶಿಸಬೇಕೆಂದು ಕೋರಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಕೆಯಾಗಿದೆ.
ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಕೆ.ಎಸ್.ಸುಬ್ಬಾರೆಡ್ಡಿ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಸುಜಾತ ಅವರಿದ್ದ ನ್ಯಾಯಪೀಠ, ಬೆಂಗಳೂರು ವಕೀಲರ ಸಂಘದ ಚುನಾವಣೆಯ ಚುನಾವಣಾಧಿಕಾರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು 2018ರ ಜ.2ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಧಾರವಾಡ ಮತ್ತು ಕಲಬುರಗಿ ಹೈಕೋರ್ಟ್ ಪೀಠಗಳು ಸ್ಥಾಪನೆಯಾದ ಬಳಿಕ ನಗರದಲ್ಲಿ ವಕೀಲ ವೃತ್ತಿ ಮಾಡುತ್ತಾ ಬೆಂಗಳೂರು ವಕೀಲರ ಸಂಘದ ಸದಸ್ಯರಾಗಿ ನೋಂದಣಿಯಾಗಿದ್ದ ಅನೇಕ ಧಾರವಾಡ ಹಾಗೂ ಕಲಬುರಗಿ ಭಾಗದ ವಕೀಲರು ತಮ್ಮ ತವರಿಗೆ ಮರಳಿದ್ದಾರೆ. ನಂತರ ಆ ಭಾಗದಲ್ಲಿ ಪ್ರತ್ಯೇಕ ವಕೀಲರ ಸಂಘಗಳು ರಚನೆ ಮಾಡಿ, ಅಲ್ಲಿಯೂ ಸದಸ್ಯರಾಗಿ ನೋಂದಣಿಯಾಗಿದ್ದರು ಎಂದು ವಿವರಿಸಿದರು.
ಅರ್ಜಿದಾರರು ಹೈಕೋರ್ಟ್‌ಗೆ 2009ರಲ್ಲಿ ಅರ್ಜಿಯೊಂದು ಸಲ್ಲಿಸಿ, ಬೆಂಗಳೂರು ವಕೀಲರ ಸಂಘದಲ್ಲಿ ಸದಸ್ಯರಾಗಿ ನೋಂದಣಿಯಾಗಿ ಬೇರೆ ಜಿಲ್ಲೆಗಳಲ್ಲಿ ವಕೀಲಿಕೆ ಮಾಡುತ್ತಿರುವರ ಹೆಸರುಗಳನ್ನು ಸದಸ್ಯರ ಪಟ್ಟಿಯಿಂದ ತೆಗೆದುಹಾಕಲು ಆದೇಶಿಸುವಂತೆ ಕೋರಿದ್ದರು. ಆ ಕುರಿತು ಹೈಕೋರ್ಟ್ ಸಹ ನಿರ್ದೇಶನ ನೀಡಿತ್ತು. ಅದರಂತೆ ಕರ್ನಾಟಕ ವಕೀಲರ ಪರಿಷತ್, ಬೆಂಗಳೂರು ವಕೀಲರ ಸಂಘದ ಸದಸ್ಯರ ಪರಿಷತ್ ಪಟ್ಟಿ ತಯಾರಿಸಿದೆ. ಬೆಂಗಳೂರಿನಲ್ಲಿ ವಕೀಲಿಕೆ ಮಾಡುತ್ತಿರುವ 11,500 ವಕೀಲರ ಸದಸ್ಯ ಪಟ್ಟಿ ಸಿದ್ಧಪಡಿಸಿದೆ ಎಂದು ತಿಳಿಸಿದರು.
ಆದರೆ, ಬೆಂಗಳೂರು ವಕೀಲರ ಸಂಘವು ಪ್ರಸ್ತುತ 15,000 ಮತದಾರರ ಪಟ್ಟಿ ತೋರಿಸುತ್ತಿದೆ. ಇದರಲ್ಲಿ ಅನೇಕರು ಇತರೆ ಜಿಲ್ಲೆಗಳಲ್ಲಿ ವಕೀಲಿಕೆ ಮಾಡುತ್ತಿದ್ದಾರೆ. 2018ರ ಜ.21ರಂದು ಸಂಘದ ಪದಾಧಿಕಾರಿಗಳ ಚುನಾವಣೆ ನಿಗದಿಪಡಿಸಿದ್ದು, ಈ 15,000 ಮತದಾರರಿಗೆ ಮತದಾನ ಅವಕಾಶ ಕಲ್ಪಿಸಲಾಗುತ್ತಿದೆ. ಈ ಕ್ರಮ ಸರಿಯಲ್ಲ. ಹೀಗಾಗಿ, ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ ಕರ್ನಾಟಕ ವಕೀಲರ ಪರಿಷತ್ ಸಿದ್ಧಪಡಿಸಿರುವ 11,500 ವಕೀಲರಿಗೆ ಮಾತ್ರ ಮತಚಲಾಯಿಸಲು ಅವಕಾಶ ಕಲ್ಪಿಸಲು ಆದೇಶಿಸಬೇಕೆಂದು ಕೋರಿದರು.







