ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ವಿರುದ್ಧ ಭಾರತದಿಂದ ಪಿತೂರಿ: ಪಾಕ್ ಆರೋಪ

ಇಸ್ಲಾಮಾಬಾದ್, ಡಿ.29: ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ವಿರುದ್ಧ ಭಾರತವು ಅಫ್ಘಾನಿಸ್ತಾನವನ್ನು ಬಳಸಿ ಪಿತೂರಿ ನಡೆಸುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದೆ. ಪಾಕಿಸ್ತಾನದ ಶತ್ರುಗಳು 50 ಬಿಲಿಯನ್ ಡಾಲರ್ ವೆಚ್ಚದ ಸಿಪಿಇಸಿ ಯೋಜನೆಯನ್ನು ಆರ್ಥಿಕವಾಗಿ ವಿಫಲಗೊಳಿಸಲು ವಿವಿಧ ತಂತ್ರಗಳನ್ನು ರೂಪಿಸುತ್ತಿದ್ದಾರೆ ಎಂದು ಪಾಕಿಸ್ತಾನದ ಆಂತರಿಕ ವ್ಯವಹಾರಗಳ ಸಚಿವ ಅಹ್ಸಾನ್ ಇಕ್ಬಾಲ್ ಡಾನ್ ಪತ್ರಿಕೆಗೆ ಹೇಳಿಕೆ ನೀಡಿದ್ದಾರೆ.
ಭಾರತವು ಸಿಪಿಇಸಿ ಯೋಜನೆಯ ವಿರುದ್ಧ ಪಿತೂರಿ ನಡೆಸುತ್ತಿದೆ. ಆದರೆ ಪಾಕಿಸ್ತಾನ ಮಾತ್ರ ಜನರ ಬೆಂಬಲದಿಂದ ಶತ್ರುರಾಷ್ಟ್ರದ ತಂತ್ರವನ್ನು ವಿಫಲಗೊಳಿಸುತ್ತಿದೆ. ತನ್ನ ಷಡ್ಯಂತ್ರಕ್ಕಾಗಿ ಭಾರತ ಅಫ್ಘಾನಿಸ್ತಾನದ ಭೂಮಿಯನ್ನು ಬಳಸುತ್ತಿದೆ ಎಂದು ಇಕ್ಬಾಲ್ ಕ್ವೆಟ್ಟಾದಲ್ಲಿ ಗುರುವಾರ ಪತ್ರಕರ್ತರಿಗೆ ತಿಳಿಸಿದ್ದಾರೆ. ಅಮೆರಿಕವು ಪಾಕಿಸ್ತಾನಕ್ಕೆ ಬೆದರಿಕೆ ಹಾಕುವುದನ್ನು ನಿಲ್ಲಿಸಬೇಕು ಎಂದು ತಿಳಿಸಿರುವ ಸಚಿವರು ಭಯೋತ್ಪಾದನೆಯ ವಿರುದ್ಧದ ಯುದ್ಧದಲ್ಲಿ ಪಾಕಿಸ್ತಾನ ಮಾಡಿರುವ ಬಲಿದಾನವನ್ನು ಅಮೆರಿಕಾ ಗುರುತಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಚೀನಾವು ಈ ಮಹಾತ್ವಾಕಾಂಕ್ಷಿ ಯೋಜನೆಯನ್ನು ಅಫ್ಘಾನಿಸ್ತಾನಕ್ಕೆ ವಿಸ್ತರಿಸುವ ಪ್ರಸ್ತಾಪವನ್ನು ಇಟ್ಟಿದೆ. ಆದರೆ ಇದಕ್ಕೆ ಭಾರತ ವಿರೋಧ ವ್ಯಕ್ತಪಡಿಸುತ್ತಿದೆ. ಈ ಯೋಜನೆಯು ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಸಾಗುವ ಕಾರಣ ಭಾರತದ ವಿರೋಧವು ಪ್ರಾಮುಖ್ಯತೆಯನ್ನು ಪಡೆದಿದೆ ಎಂದವರು ತಿಳಿಸಿದ್ದಾರೆ.





