ಬೆಂಗಳೂರು: ಪರ್ಲ್ಸ್ ಆಗ್ರೋ ಟೆಕ್ ಆಸ್ತಿ ಹರಾಜಿಗೆ ರೈತ ಸಂಘ ಆಗ್ರಹ
ಬೆಂಗಳೂರು, ಡಿ.29: ರಾಜ್ಯದ ರೈತರಿಗೆ 4500 ಕೋಟಿ ರೂ.ಗಳ ವಂಚನೆ ಮಾಡಿರುವ ಪರ್ಲ್ಸ್ ಆಗ್ರೋ ಟೆಕ್ ಕಾರ್ಪೊರೇಷನ್ ಸಂಸ್ಥೆಯ ಸೊತ್ತುಗಳನ್ನು ಹರಾಜು ಹಾಕಿ ಹಣವನ್ನು ರೈತರಿಗೆ ನೀಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹಿಸಿದೆ.
ಶುಕ್ರವಾರ ನಗರದ ಪ್ರೆಸ್‌ಕ್ಲಬ್ ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಪಿಎಸಿಎಲ್ ಕಂಪೆನಿಯು ರಾಜ್ಯದಲ್ಲಿ 40ಸಾವಿರಕ್ಕೂ ಅಧಿಕ ಪ್ರತಿನಿಧಿಗಳನ್ನು ನೇಮಕ ಮಾಡಿಕೊಂಡು, ಸಾರ್ವಜನಿಕರಿಂದ 4,500 ಕೋಟಿ ರೂ.ಗಿಂತ ಅಧಿಕ ಹಣ ಸಂಗ್ರಹಿಸಿರುತ್ತದೆ. ದೇಶಾದ್ಯಂತ 50 ಸಾವಿರ ಕೋಟಿ ರೂ.ಗಳ ವಂಚನೆ ಮಾಡಿದೆ. ಇಷ್ಟು ದೊಡ್ಡ ವಂಚನೆ ನಡೆಯುತ್ತಿದ್ದರೂ ಕೇಂದ್ರ ಹಾಗೂ ರಾಜ್ಯ ಸರಕಾರ ಸುಮ್ಮನಿರುವುದೇಕೆ ಎಂದು ಪ್ರಶ್ನಿಸಿದರು.
ಆಗ್ರೋ ಗೋಲ್ಡ್ ರೀತಿ 21 ಕಂಪನಿಗಳಿವೆ. ಹೀಗಿರುವಾಗ ಬೇಹುಗಾರಿಕೆ ಇಲಾಖೆ ಏನು ಮಾಡಿತ್ತಿದೆ. ಪೊಲೀಸ್, ಆದಾಯ ತೆರಿಗೆ, ಕಂದಾಯ ಇಲಾಖೆಗಳು ಕಂಪೆನಿಗಳ ಜತೆ ಹೊಂದಾಣಿಕೆ ಮಾಡಿಕೊಂಡು ಕಣ್ಮುಚ್ಚಿ ಕುಳಿತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಂಚನೆಗೆ ಕಡಿವಾಣ ಹಾಕುವ ಕಾನೂನು ರೂಪಿಸಿ, ವಂಚಕರನ್ನು ಬಂಧಿಸಬೇಕು. ಇಲ್ಲವಾದರೆ ಹಳ್ಳಿಗಳಲ್ಲಿ ಕಂಪನಿಗಳ ಪ್ರತಿನಿಧಿಗಳಾಗಿ ದುಡಿದ ಏಜೆಂಟರು ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಇಂತಹ ಸಂದರ್ಭದಲ್ಲಿ ಸರಕಾರ ಜವಾಬ್ದಾರಿಯಿಂದ ವರ್ತಿಸಿ, ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ನ್ಯಾ.ಎಂ.ಆರ್.ಲೋಧಾ ಸಮಿತಿ ರಚಸಿ ವರದಿ ನೀಡಿದ್ದರು ಸಹ, ಹಣ ಮರಳಿಸುವ ಕ್ರಮ ಕೈಗೊಂಡಿಲ್ಲ. ಈಗಾಗಲೇ ಲೋಧಾ ಸಮಿತಿಯೇ ವರದಿಯಲ್ಲಿ 4500 ಕೋಟಿ ರಾಜ್ಯದ ರೈತರಿಗೆ ವಂಚಿಸಿದೆ ಎಂದು ವರದಿ ನೀಡಿದೆ. ವರದಿಯ ಆಧಾರದ ಮೇಲೆ ಕಂಪನಿಯ ಸೊತ್ತನ್ನು ಮಾರಾಟ ಮಾಡಿ ಬಂದ ಹಣವನ್ನು ಮೋಸಕ್ಕೊಳಗಾದ ರೈತರಿಗೆ ಹಿಂದಿರುಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಪ್ರತಿಭಟನೆ: ಸರಕಾರದ ಗಮನ ಸೆಳೆಯಲು ಜನವರಿ 10 ರಂದು ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಮ್ ಪಾರ್ಕ್‌ವರೆಗೆ ಮೆರವಣಿಗೆ ನಡೆಸಿ ಸರಕಾರಕ್ಕೆ ಮನವಿ ಮಾಡಲಾಗುವುದೆಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಅಬ್ಬಣಿ ಶಿವಪ್ಪ, ಪ್ರೇಮಾವತಿ, ಮಂಜೇಗೌಡ, ಜಗದೀಶ್ ಸೇರಿ ಪ್ರಮುಖರಿದ್ದರು.







