ಬೆಂಗಳೂರು: ರಸ್ತೆ ಅಪಘಾತ: ಇಬ್ಬರು ಮೃತ್ಯು
ಬೆಂಗಳೂರು, ಡಿ.29: ಎರಡು ಪ್ರತ್ಯೇಕ ಕಡೆಗಳಲ್ಲಿ ಸಂಭವಿಸಿದ ಆಪಘಾತದಲ್ಲಿ ಇಬ್ಬರು ಮೃತಪಟ್ಟಿರುವ ದುರ್ಘಟನೆ ನಗರದಲ್ಲಿ ನಡೆದಿದೆ
ತಾವರೆಕೆರೆಯ ವಿಕಾಸ್ ಕುಮಾರ್ ಗೌತಮ್(28), ಪರಪ್ಪನ ಅಗ್ರಹಾರದ ದಸ್ತಗೀರ್(32) ಎಂಬುವರು ಮೃತಪಟ್ಟ ದುರ್ದೈವಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಘಟನೆಯಲ್ಲಿ ಗಾಯಗೊಂಡಿರುವ ಜೀವನ್‌ಕುಮಾರ್(25) ಎಂಬಾತ ಖಾಸಗಿ ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಗೌತಮ್, ರಾತ್ರಿ 7:30ರ ವೇಳೆ ಕೆಲಸ ಮುಗಿಸಿಕೊಂಡು ಮನೆಗೆ ಬೈಕ್‌ನಲ್ಲಿ ಬರುತ್ತಿದ್ದರು. ಮಾರ್ಗ ಮಧ್ಯೆ ಎಲಿವೇಟೆಡ್ ಮೇಲ್ಸೇತುವೆ ರಸ್ತೆಯಲ್ಲಿ ಯಾವುದೇ ಮುಂಜಾಗ್ರತಾ ಕ್ರಮವಿಲ್ಲದೆ ನಿರ್ಲಕ್ಷದಿಂದ ನಿಲ್ಲಿಸಿದ್ದ ಕಾರಿಗೆ ಢಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದಾರೆ. ಈ ವೇಳೆ ಇದೇ ವೇಗವಾಗಿ ಬಂದ ಮತ್ತೊಂದು ಕಾರು ಅವರ ಮೇಲೆ ಹರಿದ ಪರಿಣಾಮ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮೆಕ್ಯಾನಿಕ್ ಸಾವು: ಪರಪ್ಪನ ಅಗ್ರಹಾರ ರಸ್ತೆಯಲ್ಲಿ ಗುರುವಾರ ಸಂಜೆ 6ರ ವೇಳೆ ಮದ್ಯದ ಅಮಲಿನಲ್ಲಿ ಅತಿ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದ ಕಂಪೆನಿಯೊಂದರ ಉದ್ಯೋಗಿ ಕಿನಾಲ್ ಕಿಶೋರ್, ಪಂಕ್ಚರ್ ಅಂಗಡಿ ಮುಂದೆ ನಿಂತಿದ್ದ ದಸ್ತಗೀರ್ ಅವರಿಗೆ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣ ಸಂಬಂಧ ಆರೋಪಿ ಕಿನಾಲ್ ಕುಮಾರ್‌ನನ್ನು ಬಂಧಿಸಿರುವ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.







