ಮೈಸೂರು: ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆ
ಮೈಸೂರು,ಡಿ.29: ಕುವೆಂಪು ಅವರ ಬದುಕು, ವ್ಯಕಿತ್ವ ಮತ್ತು ಬರವಣಿಗೆ ಇವೆಲ್ಲ ನವ ಸಮಾಜ ನಿರ್ಮಾಣಕ್ಕೆ ಬದ್ಧವಾದವು ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ತಿಳಿಸಿದರು. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕುವೆಂಪು ಜಯಂತ್ಯುತ್ಸವ ಸಮಿತಿ ಸಹಯೋಗದಲ್ಲಿ ಕಲಾಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆಯಲ್ಲಿ ಮುಖ್ಯ ಭಾಷಣ ಮಾಡಿದರು. ಕುವೆಂಪು ಅವರೇ ಒಂದು ಕಡೆ ‘ಉದಯಿಸುತ್ತಿದೆ ನೂತನ ಯುಗ ದೇವತೆಯು ಮಿಥ್ಯೆಯ ಮೌಢ್ಯತೆಯನ್ನು ಸೀಳಿ’ ಎಂದು ಹೇಳಿದ್ದಾರೆ. ಈ ನೂತನ ಯುಗ ದೇವತೆಯ ಸಾಷ್ಕಾತ್ ಕಾರ್ಯವೇ ಕುವೆಂಪು ಅವರ ಬದುಕು, ಬರಹಗಳ ಗುರಿಯಾಗಿತ್ತು. ನಮ್ಮ ಗುರಿಯೂ ಅದೇ ಆಗಬೇಕು ಎಂದು ತಿಳಿಸಿದರು. ಕುವೆಂಪು ಕೇವಲ ಕವಿ ಅಲ್ಲ, ಅಸ್ತರವನ್ನು ಮೀರಿದ ಬಂಡಾಯ, ಕ್ರಾಂತಿಮುಖಿಯಾದ ಚೇತನ. ಕರ್ನಾಟಕದ ಸಾಂಸ್ಕೃತಿಕ ನೇತಾರ. ಕುವೆಂಪು ಕನ್ನಡ ಸಾಹಿತ್ಯವನ್ನು ವಿಶ್ವ ಸಾಹಿತ್ಯದ ವೇದಿಕೆಗೆ ಏರಿಸಿದ ಮಹಾಕವಿ. ಅಕ್ಷರಸಃ ಅವರೊಬ್ಬ ರಾಷ್ಟ್ರಕವಿ, ವಿಶ್ವ ಪ್ರಜ್ಞೆಯ ಲೇಖಕ ಎಂದು ಹೇಳಿದರು.
ಕುವೆಂಪು ಅವರು ಬಸವಣ್ಣ ಅವರನ್ನು ಕುರಿತು ಮಾನವ ಹೃದಯದ ದೇವ ಕೃಷಿಕ ಎಂದಿದ್ದಾರೆ. ಈ ಮಾತು ಕುವೆಂಪು ಅವರಿಗೂ ಅನ್ವಯಿಸುತ್ತದೆ. ಕುವೆಂಪು ಸಾಹಿತ್ಯದ ಯುಗಧರ್ಮ ಸರ್ವೋದಯ ಮತ್ತು ಸಮನ್ವಯ, ಪೂರ್ಣದೃಷ್ಟಿ ಎಂದರು.
ಶಾಸಕ ಜಿ.ಟಿ.ದೇವೇಗೌಡ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ರಸಋಷಿ ಕುವೆಂಪು ಅವರು ಸೃಷ್ಟಿಯ ರಹಸ್ಯವನ್ನು ಶ್ರೀ ಸಾಮಾನ್ಯನಿಗೂ ಅರ್ಥವಾಗುವ ರೀತಿಯಲ್ಲಿ ತೆರೆದಿಟ್ಟ ಮಹಾಕವಿ. ಮನುಜ ಮತ, ವಿಶ್ವಪಥ ಸಂದೇಶ ಸಾರಿದ ಹೊಸ ಕನ್ನಡದ ಹಿರಿಯ ಕವಿ ಕುವೆಂಪು. ಇವರ ಸಾಹಿತ್ಯವನ್ನು ಓದಬೇಕು. ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಶಾಸಕ ವಾಸು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೈಸೂರು ವಿಶ್ವವಿದ್ಯಾನಿಲಯವನ್ನು ದೇಶದ ಉತ್ತಮ ವಿದ್ಯಾಲಯವಾಗಿ ರೂಪಿಸಿದ ಕೀರ್ತಿ ಕುವೆಂಪು ಅವರಿಗೆ ಸಲ್ಲುತ್ತದೆ. ಕುವೆಂಪು ಅವರ ಸಮಷ್ಟಿ ಬದುಕು ನಮಗೆಲ್ಲ ಮಾರ್ಗದರ್ಶನವಾಗಿದೆ ಎಂದು ನುಡಿದರು.
ಉಪ ಮಹಾಪೌರರಾದ ರತ್ನ ಲಕ್ಷ್ಮಣ್, ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಉಪ ವಿಭಾಗಾಧಿಕಾರಿ ಶಿವೇಗೌಡ, ನಗರ ಪಾಲಿಕೆ ಸದಸ್ಯ ಚೌಹಳ್ಳಿ ಪುಟ್ಟಸ್ವಾಮಿ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್, ಹಿರಿಯ ರಂಗಕರ್ಮಿ ರಾಜಶೇಖರ ಕದಂಬ, ಹೋರಾಟಗಾರ ತಾಯೂರು ವಿಠಲಮೂರ್ತಿ, ವಿಶ್ವಮಾನವ ಯುವ ವೇದಿಕೆ ಎಂ.ಜಿ.ಸುರೇಶ್‌ಗೌಡ, ನಾಗರಾಜು, ರಾಮಪ್ಪ ಮುಂತಾದವರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹನೂರು ಚನ್ನಪ್ಪ ಸ್ವಾಗತಿಸಿದರು. ಮೈಸೂರಿನ ಶ್ವೇತ ಮಡಪ್ಪಾಡಿ ಮತ್ತು ತಂಡದವರು ಕುವೆಂಪು ಗೀತೆಗಳನ್ನು ಹಾಡಿದರು. ಮಾತನಾಡುವ ಬೊಂಬೆ ಖ್ಯಾತಿಯ ಕಲಾವಿದೆ ಸುಮಾ ರಾಜ್‌ಕುಮಾರ್ ನಿರೂಪಿಸಿ ವಂದಿಸಿದರು.







