ಮೈಸೂರು: ವಿಜ್ಞಾನ ಲೇಖಕ ಜೆ.ಆರ್.ಲಕ್ಷ್ಮಣರಾವ್ ನಿಧನ
ಮೈಸೂರು,ಡಿ.29: ವಿಜ್ಞಾನ ಲೇಖಕ, ಮೈಸೂರು ವಿಶ್ವವಿದ್ಯಾನಿಲಯದ ರಸಾಯನ ಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ ಜೆ.ಆರ್.ಲಕ್ಷ್ಮಣರಾವ್ (97) ಶುಕ್ರವಾರ ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ.
ಇವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ದಾವಣಗೆರೆಯ ಜಗಳೂರಿನಲ್ಲಿ ಜನ್ಮ ತಳೆದ ಲಕ್ಷ್ಮಣರಾವ್ ದಾವಣಗೆರೆಯಲ್ಲಿ ಪ್ರೌಢಶಾಲೆಯಲ್ಲಿ ಕಲಿತು, ಮೈಸೂರು ಇಂಟರ್ ಮೀಡಿಯೇಟ್ ಕಾಲೇಜಿನಿಂದ ಇಂಟರ್ ಮೀಡಿಯೆಟ್ ಮತ್ತು ಮೈಸೂರು ವಿಶ್ವವಿದ್ಯಾನಿಲಯದಿಂದ ಬಿಎಸ್ಸಿ , ಎಂಎಸ್ಸಿ ಪದವಿ ಪಡೆದಿದ್ದರು. ಬೆಂಗಳೂರು, ಶಿವಮೊಗ್ಗಾ, ಮೈಸೂರಿನ ಮಹಾರಾಜ, ಯುವರಾಜ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿಯೂ ಕಾರ್ಯನಿರ್ವಹಿಸಿದ್ದರು. ವಿವಿ ಪ್ರಸಾರಾಂಗ ಹೊರತಂದ ಇಂಗ್ಲಿಷ್ ನಿಘಂಟಿನ ಪ್ರಧಾನ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದು, ಪರಮಾಣು ಚರಿತ್ರೆ, ಗೆಲಿಲಿಯೋ, ವಿಜ್ಞಾನವಿಚಾರ, ಲೂಯಿ ಪಾಶ್ಚರ್, ವಿಜ್ಞಾನಿಗಳೊಡನೆ ರಸನಿಮಿಷಗಳು ಸೇರಿದಂತೆ ಹಲವು ಪ್ರಮುಖ ಕೃತಿಗಳನ್ನು ರಚಿಸಿದ್ದಾರೆ. ಇವರು ಮೂವರು ಪುತ್ರಿಯರು ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ. ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ





