ಕುಸಿದ ದಿಲ್ಲಿಗೆ ಧ್ರುವ್ ಶೋರೆ ಶತಕದಾಸರೆ
ರಣಜಿ ಟ್ರೋಫಿ ಫೈನಲ್

ಇಂದೋರ್, ಡಿ.29: ಧ್ರುವ್ ಶೋರೆ ದಾಖಲಿಸಿದ ಶತಕದ ನೆರವಿನಲ್ಲಿ ದಿಲ್ಲಿ ತಂಡ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ಆರಂಭಗೊಂಡ ರಣಜಿ ಟ್ರೋಫಿ ಫೈನಲ್‌ನಲ್ಲಿ ವಿದರ್ಭ ವಿರುದ್ಧ ಉತ್ತಮ ಮೊತ್ತ ದಾಖಲಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ದಿಲ್ಲಿ ತಂಡ ದಿನದಾಟದಂತ್ಯಕ್ಕೆ ಮೊದಲ ಇನಿಂಗ್ಸ್‌ನಲ್ಲಿ 88 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 271 ರನ್ ಗಳಿಸಿದೆ.
ಆಟ ನಿಂತಾಗ 123 ರನ್ ಗಳಿಸಿರುವ ಧ್ರುವ್ ಶೋರೆ ಮತ್ತು ವಿಕಾಸ್ ಮಿಶ್ರಾ 5 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಮೊದಲ ಬಾರಿ ಆಡುತ್ತಿರುವ ಮಧ್ಯಮ ವೇಗಿ 19ರ ಹರೆಯದ ಆದಿತ್ಯ ಠಾಕರೆ ಮೊದಲ ಓವರ್‌ನ ನಾಲ್ಕನೇ ಎಸೆತದಲ್ಲಿ ಆರಂಭಿಕ ದಾಂಡಿಗ ಕುನಾಲ್ ಚಾಂಡೆಲಾಗೆ ಪೆವಿಲಿಯನ್ ಹಾದಿ ತೋರಿಸಿದರು. 4 ಎಸೆತಗಳನ್ನು ಎದುರಿಸಿದ್ದರೂ ಚಾಂಡೆಲಾಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ತಂಡದ ಸ್ಕೋರ್ 30ಕ್ಕೆ ತಲುಪುವಾಗ ದಿಲ್ಲಿಗೆ ಇನ್ನೊಂದು ಆಘಾತ ಕಾದಿತ್ತು. ಆರಂಭಿಕ ದಾಂಡಿಗ ಗೌತಮ್ ಗಂಭೀರ್ (15) ಅವರು ಅಕ್ಷಯ್ ವಾಖರೆ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.
ನಿತೀಶ್ ರಾಣಾ (21) ಅವರನ್ನು ಆದಿತ್ಯ ಠಾಕರೆ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಠಾಕರೆ ಮತ್ತು ರಜನೀಶ್ ಗುರ್ಬಾನಿ ಆರಂಭದಲ್ಲೇ ದಿಲ್ಲಿಯ ಬ್ಯಾಟಿಂಗ್‌ಗೆ ಕಡಿವಾಣ ಹಾಕಿದರು. ಇದರಿಂದಾಗಿ ದಿಲ್ಲಿ ತಂಡ 26.3 ಓವರ್‌ಗಳಲ್ಲಿ 65 ರನ್ ಗಳಿಸುವ ಹೊತ್ತಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು.
ನಾಯಕ ರಿಷಬ್ ಪಂತ್ ಅವರು ಶೋರೆಗೆ ಜೊತೆಯಾದರು. ಆದರೆ ಅವರಿಗೆ ಶೋರೆ ಜೊತೆ 34 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಪಂತ್ 21 ರನ್ ಗಳಿಸಿ ಗುರ್ಬಾನಿ ಎಸೆತದಲ್ಲಿ ಆಕ್ಷಯ್‌ಗೆ ಕ್ಯಾಚ್ ನೀಡಿದರು.
ಊಟದ ವಿರಾಮದ ಬಳಿಕ ದಿಲ್ಲಿ ತಂಡ ವಿದರ್ಭದ ದಾಳಿಯನ್ನು ಸಮರ್ಥವಾಗಿ ಎದುರಿಸಿತು. ಶೋರೆ ಮತ್ತು ಹಿಮ್ಮತ್ ಸಿಂಗ್ ಐದನೇ ವಿಕೆಟ್‌ಗೆ 105 ರನ್‌ಗಳ ಜೊತೆಯಾಟ ನೀಡಿದರು. ಶೋರೆ ಮೂರನೇ ಪ್ರಥಮ ದರ್ಜೆ ಶತಕ ದಾಖಲಿಸಿದರು. ಸಿಂಗ್ ವೇಗವಾಗಿ ಅರ್ಧಶತಕ ದಾಖಲಿಸಿದರು. ಸಿಂಗ್ ಶತಕ ಗಳಿಸುವ ಯೋಜನೆಯಲ್ಲಿದ್ದರು. ಆದರೆ ಅವರ ಬ್ಯಾಟಿಂಗ್ 66ರಲ್ಲಿ ಕೊನೆಗೊಂಡಿತು. ಸಿಂಗ್ 72 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 66 ರನ್ ಗಳಿಸಿ ರಜನೀಶ್ ಎಸೆತದಲ್ಲಿ ಅಕ್ಷಯ್‌ಗೆ ಕ್ಯಾಚ್ ನೀಡಿದರು.
ಮನನ್ ಶರ್ಮಾ ಅವರು ಶೋರೆಗೆ ಉತ್ತಮ ಬೆಂಬಲ ನೀಡಿದರು. ಶೋರೆ ಈ ಆವೃತ್ತಿಯ ರಣಜಿ ಪಂದ್ಯಗಳಲ್ಲಿ 3 ಬಾರಿ ಅರ್ಧಶತಕಗಳನ್ನು ದಾಖಲಿಸಿದ್ದರು. ಆದರೆ ಶತಕ ಸಾಧ್ಯವಾಗಿರಲಿಲ್ಲ. ಅಂತಿಮ ಪಂದ್ಯದಲ್ಲಿ ಅವರು ಕೊನೆಗೂ ಶತಕ ದಾಖಲಿಸಿದರು. ಸಿಂಗ್ ಔಟಾದ ಬಳಿಕ ದಿಲ್ಲಿ ಮತ್ತೆ ಒತ್ತಡಕ್ಕೆ ಸಿಲುಕಿತು. ಮನನ್ ಶರ್ಮಾ 13 ರನ್ ಗಳಿಸಿ ಔಟಾದರು.
ದಿಲ್ಲಿ ತಂಡ 76.2 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 242 ರನ್ ಗಳಿಸಿತ್ತು. ಆಗ ಶೋರೆ ಮತ್ತು ವಿಕಾಸ್ ಮಿಶ್ರಾ ತಂಡಕ್ಕೆ ಆಸರೆಯಾದರು. ಶೋರೆ ಮತ್ತು ಮಿಶ್ರಾ ಮುರಿಯದ ಜೊತೆಯಾಟದಲ್ಲಿ 29 ರನ್ ಸೇರಿಸಿದ್ದಾರೆ.
ಶೋರೆ 256 ಎಸೆತಗಳನ್ನು ಎದುರಿಸಿ 17 ಬೌಂಡರಿಗಳ ನೆರವಿನಲ್ಲಿ 123 ರನ್ ಗಳಿಸಿದ್ದಾರೆ.
ವಿದರ್ಭ ತಂಡದ ಆದಿತ್ಯ ಠಾಕರೆ ಮತ್ತು ರಜನೀಶ್ ಗುರ್ಬಾನಿ ತಲಾ 2 ವಿಕೆಟ್‌ಗಳನ್ನು ಪಡೆದರು. ಸಿದ್ದೇಶ್ ನೆರಲ್ ಮತ್ತು ಅಕ್ಷಯ್ ವಾಖರೆ ತಲಾ 1 ವಿಕೆಟ್ ಕಬಳಿಸಿದರು.
ಸ್ಕೋರ್ ಪಟ್ಟಿ
►ದಿಲ್ಲಿ ಮೊದಲ ಇನಿಂಗ್ಸ್: 88 ಓವರ್‌ಗಳಲ್ಲಿ 271/6
ಕುನಾಲ್ ಚಾಂಡೆಲಾ ಸಿ ಫಝಲ್ ಬಿ ಆದಿತ್ಯ 00
ಗೌತಮ್ ಗಂಭೀರ್ ಬಿ ವಾಖರೆ 15
ಧ್ರುವ್ ಶೋರೆಬ್ಯಾಟಿಂಗ್ 123
ನಿತೀಶ್ ರಾಣಾ ಎಲ್‌ಬಿಡಬ್ಲು ಬಿ ಠಾಕರೆ 21
ರಿಷಬ್ ಪಂತ್ ಸಿ ವಾಡೇಕರ್ ಬಿ ಗುರ್ಬಾನಿ 21
ಹಿಮ್ಮತ್ ಸಿಂಗ್ ಸಿ ವಾಡೇಕರ್ ಬಿ ಗುರ್ಬಾನಿ 66
ಮನನ್ ಶರ್ಮಾ ಸಿ ಫಝಲ್ ಬಿ ಸಿದ್ದೇಶ್ 13
ವಿಕಾಶ್ ಮಿಶ್ರಾ ಬ್ಯಾಟಿಂಗ್ 05
►ವಿಕೆಟ್ ಪತನ: 1-1, 2-30, 3-65, 4-99, 5-204, 6-242
►ಬೌಲಿಂಗ್ ವಿವರ
ಆದಿತ್ಯ ಠಾಕರೆ 21.1-3-65-2
ಆರ್.ಗುರ್ಬಾನಿ 16.5-5-44-2
ಸಿದ್ದೇಶ್ ನೆರಲ್ 19.0-3-57-1
ಅಕ್ಷಯ್ ವಾಖರೆ 16.0-5-34-1
ಆದಿತ್ಯ ಸರ್ವಾಟೆ 12.0-0-60-0
ಫೈಝ್ ಫಝಲ್ 01.0-0-05-0
ಎಸ್.ರಾಮಸ್ವಾಮಿ 02.0-0-03-0







