ಬಾಗೇಪಲ್ಲಿ: ರೈತರು ಹಾಗೂ ಕಾರ್ಮಿಕರ ಬಂಧನ ಖಂಡಿಸಿ ಪ್ರತಿಭಟನೆ

ಬಾಗೇಪಲ್ಲಿ,ಡಿ.30: ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಸಮಯದಲ್ಲಿ ರೈತರು ಹಾಗೂ ಕಾರ್ಮಿರನ್ನು ಬಂಧಿಸಿರುವುದನ್ನು ಖಂಡಿಸಿ ಜೆಡಿಎಸ್ ಕಾರ್ಯಕರ್ತರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಡಾ.ಎಚ್.ಎನ್.ವೃತ್ತದಿಂದ ಮೆರವಣಿಗೆಯಲ್ಲಿ ಬಂದ ಕಾರ್ಯಕರ್ತರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಗುಂಜೂರು ಶ್ರೀನಿವಾಸರೆಡ್ಡಿ, ಎಚ್.ಡಿ.ದೇವೆಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ಕೃಪೆಯಿಂದ ಉಪ ಮುಖ್ಯಮಂತ್ರಿ ಸ್ಥಾನ ಪಡೆದು ಅಧಿಕಾರ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜೆಡಿಎಸ್ ಪಕ್ಷದ ವರಿಷ್ಠರ ಮೇಲೆ ವಾಗ್ದಾಳಿ ನಡೆಸಿರುವುದನ್ನು ಖಂಡಿಸಿದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನೆಲಕಚ್ಚುವುದು ಖಚಿತ ಎಂದ ಅವರು ಕೋಲಾರ ಜಿಲ್ಲೆಯಿಂದ ಚಿಕ್ಕಬಳ್ಳಾಪುರ ಉಪ ವಿಭಾಗವನ್ನು ಪ್ರತ್ಯೇಕಿಸಿ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ರಚನೆ ಮಾಡಿದ್ದು ಎಚ್.ಡಿ.ಕುಮಾರಸ್ವಾಮಿಯಾಗಿದ್ದಾರೆ. ಆಂಧ್ರ ಗಡಿಭಾಗದಲ್ಲಿರುವ ತಾಲೂಕಿನಲ್ಲಿ 1500ರಿಂದ 2ಸಾವಿರ ಅಡಿಗಳ ಕೊಳವೆ ಬಾವಿ ಕೊರೆಸಿದರೂ ನೀರು ಸಿಗದ ಪರಿಸ್ಥಿತಿ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಧನೆ ಸಮಾವೇಶ ಹಾಗೂ ಅಭಿವೃದ್ದಿ ಕಾರ್ಯಕ್ರಮಗಳ ಉದ್ಘಾಟನೆ ಹಿನ್ನೆಲೆಯಲ್ಲಿ ಯಾವುದೇ ತಿಳುವಳಿಕೆ ನೀಡದೆ ರೈತರು ಹಾಗೂ ಶಾಶ್ವತ ನೀರಾವರಿ ಹೋರಾಟಗಾರರನ್ನು ಬಂಧಿಸಿದ್ದು ಖಂಡನೀಯ ಎಂದ ಅವರು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಜನರಿಗೆ ಸುಳ್ಳು ಭರವಸೆಗಳನ್ನು ನೀಡಿದ್ದಾರೆ.ಎತ್ತಿನಹೊಳೆ ಯೋಜನೆಗೆ 4 ವರ್ಷಗಳ ಹಿಂದೆ ಗುದ್ದಲಿ ಪೂಜೆ ನೆರವೇರಿಸಲಾಗಿತ್ತು. ಈ ಸಂದರ್ಭದಲ್ಲಿ ಸ್ವತಃ ಮುಖ್ಯಮಂತ್ರಿಗಳು 2 ವರ್ಷಗಳಲ್ಲಿ ಬಯಲು ಸೀಮೆ ಜಿಲ್ಲೆಗಳ ಕೆರೆ ಕುಂಟೆಗಳಿಗೆ ಹರಿಸಲಾಗುವುದು ಎಂದು ಹೇಳಿದ್ದರು. ಗುದ್ದಲಿ ಪೂಜೆ ನೆರವೇರಿಸಿ 4 ವರ್ಷಗಳ ಕಳೆಯುತ್ತಾ ಬಂದರೂ ಎತ್ತಿನ ಹೊಳೆ ಯೋಜನೆ ಅನುಷ್ಠಾನವಾಗಿಲ್ಲ. 2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಸ್ ಪಕ್ಷ ಬಹುಮತ ಪಡೆದು ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ಖಚಿತ ಆಗ ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆಗೆ ಹಸಿರು ನಿಶಾನೆ ತೋರಿಸಲಿದ್ದಾರೆ ಎಂದರು.
ತಾಪಂ ಸದಸ್ಯರಾದ ಕೆ.ಕೆ.ವೆಂಕಟೇಶ್,ಕೆ.ಎನ್.ರಾಮಕೃಷ್ಣಾರೆಡ್ಡಿ ಹಾಗೂ ಮುಖಂಡರಾದ ಜಿ.ಎಂ.ರಾಮಕೃಷ್ಣಪ್ಪ,ಲಕ್ಷ್ಮೀನಾರಾಯಣ,ರಾಮಚಂದ್ರಪ್ಪ,ಎಸ್.ಪಿ.ರೆಡ್ಡಿ,ವೆಂಕಟರಾಮರೆಡ್ಡಿ ಮತ್ತಿತರರು ಹಾಜರಿದ್ದರು.





