ಉ.ಪ್ರದೇಶ: ಮಹಿಳೆಯ ಸಾಮೂಹಿಕ ಅತ್ಯಾಚಾರ
.jpg)
ಲಕ್ನೊ, ಡಿ.30: ಮಹಿಳೆಯೊಬ್ಬಳನ್ನು ಕುಟುಂಬ ಸದಸ್ಯರ ಸಹಿತ ಅಪಹರಿಸಿದ ತಂಡವೊಂದು ಪುರುಷ ಸದಸ್ಯರ ಮೇಲೆ ಹಲ್ಲೆ ನಡೆಸಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯ ನೊಜಾಲ್ ಗ್ರಾಮದಲ್ಲಿ ನಡೆದಿದೆ.
ಗಾಝಿಯಾಬಾದ್ ಭೋಪುರದ ವ್ಯಕ್ತಿಯೋರ್ವ ಮುಝಾಫರ್‌ನಗರ ನಿವಾಸಿ 24ರ ಹರೆಯದ ಮಹಿಳೆಯೊಂದಿಗೆ ನ.20ರಂದು ನಾಪತ್ತೆಯಾಗಿದ್ದ. ಈ ಘಟನೆಗೆ ಪ್ರತೀಕಾರದ ಕ್ರಮವೆಂಬಂತೆ ಮಹಿಳೆಯ ಕುಟುಂಬದವರು ಡಿ.19ರಂದು ಆ ವ್ಯಕ್ತಿಯ ಸೋದರ, ತಂದೆ, ತಾಯಿ ಮತ್ತು ಬಾವನನ್ನು ಅಪಹರಿಸಿ ಶಾಮ್ಲಿ ಜಿಲ್ಲೆಯ ಮನೆಯೊಂದರಲ್ಲಿ ಕೂಡಿಹಾಕಿದ್ದರು.
ಬಳಿಕ ಅವರೆಲ್ಲರನ್ನು ಥಳಿಸಿದ್ದು 40ರ ಹರೆಯದ ಮಹಿಳೆ(ತಾಯಿ)ಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಖಚಿತ ಮಾಹಿತಿಯ ಮೇರೆಗೆ ಮನೆಗೆ ದಾಳಿ ನಡೆಸಿದ ಪೊಲೀಸರು ಅಪಹೃತರನ್ನು ರಕ್ಷಿಸಿದ್ದಾರೆ. ಆರೋಪಿಗಳ ವಿರುದ್ಧ ಅಪಹರಣ ಹಾಗೂ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವ್ಯಕ್ತಿಯ ಜೊತೆ ಪರಾರಿಯಾಗಿದ್ದ ಮಹಿಳೆಯ ಅಣ್ಣ, ತಂದೆ ಮತ್ತು ತಂದೆಯ ಇಬ್ಬರು ಸೋದರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ . ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿದ್ದು ಉಳಿದವರು ತಲೆಮರೆಸಿಕೊಂಡಿರುವುದಾಗಿ ಪೊಲೀಸ್ ಅಧೀಕ್ಷಕ ಅಜಯ್‌ಪಾಲ್ ಶರ್ಮ ತಿಳಿಸಿದ್ದಾರೆ.







