ವಿದ್ಯುತ್ ತಿದ್ದುಪಡಿ ಮಸೂದೆ: ಇಂಧನ ಸಂಘಟನೆಗಳಿಂದ ಬಂದ್ ಎಚ್ಚರಿಕೆ
.jpg)
ಮಥುರ, ಡಿ.30: ಸದ್ಯ ಅಸ್ತಿತ್ವದಲ್ಲಿರುವ ವಿದ್ಯುತ್ ಹಂಚಿಕಾ ವ್ಯವಸ್ಥೆಯನ್ನು ವಿಂಗಡಿಸು ಕೇಂದ್ರ ಸರಕಾರದ ನಿರ್ಧಾರವನ್ನು ವಿರೋಧಿಸಿ ಅಖಿಲ ಭಾರತ ಇಂಧನ ಒಕ್ಕೂಟ ಮತ್ತು ಎನ್‌ಸಿಸಿಒಇಇಇ ಬಂದ್ ನಡೆಸುವ ಎಚ್ಚರಿಕೆಯನ್ನು ನೀಡಿದೆ ಎಂದು ಸಂಘಟನೆಯ ಪ್ರತಿನಿಧಿಗಳು ತಿಳಿಸಿದ್ದಾರೆ.
ಮುಂದಿನ ಬಜೆಟ್ ಅಧಿವೇಶನದಲ್ಲಿ ಕೇಂದ್ರ ಇಂಧನ ಸಚಿವಾಲಯವು ವಿದ್ಯುತ್ ತಿದ್ದುಪಡಿ ಮಸೂದೆಯನ್ನು ಪರಿಚಯಿಸುವ ಸಾಧ್ಯತೆಯಿದೆ. ಈ ಮಸೂದೆಯ ಪ್ರಕಾರ ವಿದ್ಯುತ್ ಹಂಚಿಕಾ ಜಾಲ ವ್ಯವಹಾರ ಮತ್ತು ವಿದ್ಯುತ್ ಪೂರೈಕೆ ವ್ಯವಹಾರವನ್ನು ಪ್ರತ್ಯೇಕಗೊಳಿಸಲಾಗುತ್ತದೆ.
ಸರಕಾರವು ಸದ್ಯ ಇರುವ ವಿದ್ಯುತ್ ಪೂರೈಕೆಯ ಹಂಚಿಕಾ ವ್ಯವಸ್ಥೆಯನ್ನು ವಿಂಗಡಿಸಲು ಏಕಪಕ್ಷೀಯವಾಗಿ ನಿರ್ಧರಿಸಿದರೆ ಎನ್‌ಸಿಸಿಒಇಇಇಯ 25 ಲಕ್ಷ ಸದಸ್ಯರು ಒಂದು ದಿನದ ಬಂದ್ ಆಚರಿಸುವುದಾಗಿ ಎನ್‌ಸಿಸಿಒಇಇಇ (ವಿದ್ಯುತ್ ಉದ್ಯೋಗಿಗಳು ಮತ್ತು ಇಂಜಿನಿಯರ್‌ಗಳ ರಾಷ್ಟ್ರೀಯ ಸಹಕಾರ ಸಮಿತಿ) ಯ ಸಹಸಂಚಾಲಕ ಮತ್ತು ಅಖಿಲ ಭಾರತ ವಿದ್ಯುತ್ ಇಂಜಿನಿಯರ್‌ಗಳ ಒಕ್ಕೂಟದ ಮುಖ್ಯಸ್ಥರಾದ ಶೈಲೇಂದ್ರ ದುಬೆ ಎಚ್ಚರಿಸಿದ್ದಾರೆ.
ಬಂದ್ ನಡೆಸುವ ಬಗ್ಗೆ ಈಗಾಗಲೇ ಸರಕಾರಕ್ಕೆ ಪತ್ರ ಕಳುಹಿಸಲಾಗಿದ್ದು ಸರಕಾರವು ತನ್ನ ನಿರ್ಧಾರವನ್ನು ಬದಲಿಸದಿದ್ದರೆ ಮುಂದಿನ ಕ್ರಮವನ್ನು ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಜನವಿರೋಧಿ ಮತ್ತು ಕೊರ್ಪೊರೇಟ್ ಸಂಸ್ಥೆಗಳ ಪರವಾಗಿರುವ ಈ ಮಸೂದೆಯ ಬಗ್ಗೆ ಜನರಿಗೆ ಅರಿವು ಮೂಡಿಸಲು ಬಜೆಟ್ ಅಧಿವೇಶನ ನಡೆಯುವ ವೇಳೆ ದಿಲ್ಲಿಯಲ್ಲಿ ಈ ಬಗ್ಗೆ ಪ್ರದರ್ಶನಗಳನ್ನು ನಡೆಸಲಾಗುವುದು ಎಂದು ದುಬೆ ತಿಳಿಸಿದ್ದಾರೆ.
ವಿದ್ಯುತ್ ಹಂಚಿಕಾ ವ್ಯವಸ್ಥೆಯನ್ನು ವಿಂಗಡಿಸುವುದರಿಂದ ದೂರಸಂಪರ್ಕ ಸೇವೆಯಲ್ಲಿರುವಂತೆ ಜನರಿಗೆ ಹಲವು ವಿದ್ಯುತ್ ಸೇವಾ ಪೂರೈಕೆದಾರರ ಮಧ್ಯೆ ಆಯ್ಕೆ ಮಾಡುವ ಅವಕಾಶ ಸಿಗಲಿದೆ. ಈ ಮೂಲಕ ಸರಕಾರವು ವಿದ್ಯುತ್ ಕ್ಷೇತ್ರವನ್ನು ಖಾಸಗಿಕರಣಗೊಳಿಸಲು ಮತ್ತು ನಷ್ಟವನ್ನು ರಾಷ್ಟ್ರೀಯಗೊಳಿಸಲು ಮುಂದಾಗಿದೆ ಎಂದು ದುಬೆ ಆರೋಪಿಸಿದ್ದಾರೆ.
ಈ ಮಸೂದೆಯ ಕೆಟ್ಟ ಅಂಶವೆಂದರೆ ಇದು ಕೊರ್ಪೊರೇಟ್ ಸಂಸ್ಥೆಗಳಿಗೆ ಬಂಪರ್ ಕೊಡುಗೆಯನ್ನು ನೀಡಲಿದ್ದು ಜನರ ಮೇಲೆ ಹಿಂದಿನ ಬಾಗಿಲಿನಿಂದ ತೆರಿಗೆ ವಿಧಿಸಲಿದೆ ಎಂದು ಅವರು ತಿಳಿಸಿದ್ದಾರೆ.







