ಬದುಕನ್ನು ರೂಪಿಸಿಕೊಳ್ಳಲು ಕುವೆಂಪು ಸಾಹಿತ್ಯ ದಾರಿದೀಪ: ದೊಡ್ಡರಂಗೇಗೌಡ
ಬೆಂಗಳೂರು, ಡಿ.30: ವ್ಯಕ್ತಿಯೊಬ್ಬ ತನ್ನ ವೈಯಕ್ತಿಕ ಬದುಕನ್ನು ಕಟ್ಟಿಕೊಳ್ಳುತ್ತಲೇ ಸಾಮಾಜಿಕ ಹಾಗೂ ವೈಚಾರಿಕವಾಗಿ ಮಾನವೀಯ ವೌಲ್ಯಗಳನ್ನು ಹೊಂದುವುದು ಹೇಗೆಂದು ಕುವೆಂಪು ಸಾಹಿತ್ಯದ ಓದು ನಮಗೆ ತಿಳಿಸಿಕೊಡಬಲ್ಲದು ಎಂದು ಹಿರಿಯ ಕವಿ ದೊಡ್ಡರಂಗೇಗೌಡ ತಿಳಿಸಿದರು.
ಶನಿವಾರ ಮಾತೃಭೂಮಿ ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಕುವೆಂಪು ಜಯಂತ್ಯುತ್ಸವ ಮತ್ತು ಕುವೆಂಪು ವಿಶ್ವಮಾನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರು ಓದಿ, ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸ್ಫೂರ್ತಿಯಾಗುವಂತಹ ಸಾಹಿತ್ಯವನ್ನು ಕುವೆಂಪು ನಮಗೆ ಕೊಟ್ಟು ಹೋಗಿದ್ದಾರೆ ಎಂದು ಅಭಿಮಾನಪಟ್ಟರು.
ಕುವೆಂಪು ರಚಿಸಿರುವ ಪರಿಸರದ ಕುರಿತು ಪದ್ಯಗಳನ್ನು ಓದಿದರೆ ಇವರೊಬ್ಬ ಪರಿಸರ ಬರಹಗಾರ ಅನಿಸುತ್ತದೆ. ಅವರ ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡಿತಿ ಕಾದಂಬರಿಗಳನ್ನು ಓದಿದರೆ ಅವರಂತಹ ಕಾದಂಬರಿಕಾರ ಜಗತ್ತಿನಲ್ಲಿಯೇ ಮತ್ತೊಬ್ಬರಿಲ್ಲ ಎಂದೆನಿಸುತ್ತದೆ. ಹೀಗೆ ಕುವೆಂಪು ಪ್ರತಿಯೊಂದು ಸಾಹಿತ್ಯ ಪ್ರಕಾರಗಳಲ್ಲಿಯೂ ಅತ್ಯುನ್ನತವಾದುದ್ದನ್ನೇ ನೀಡಿದ್ದಾರೆ ಎಂದು ಅವರು ಸ್ಮರಿಸಿದರು.
ಪ್ರತಿಯೊಬ್ಬನಲ್ಲೂ ಬರಹಗಾರನಿರುತ್ತಾನೆ. ಆ ಮನಸ್ಥಿತಿಯನ್ನು ಜಾಗೃತಿಗೊಳಿಸಿಕೊಂಡಾಗ ಮಾತ್ರ ಬರೆಯಲು ಸಾಧ್ಯವಾಗುತ್ತದೆ. ತಮ್ಮ ಸುತ್ತಮುತ್ತಲಿನ ಪ್ರತಿಯೊಂದು ಘಟನೆಯನ್ನು ಸೂಕ್ಷ್ಮಾತಿ ಸೂಕ್ಷ್ಮವಾಗಿ ಗ್ರಹಿಸಬೇಕು. ಹಾಗೂ ಆ ಗ್ರಹಿಕೆಯಿಂದ ಸಿಕ್ಕ ಅನುಭವವನ್ನು ಅಕ್ಷರ ರೂಪಕ್ಕೆ ಇಳಿಸುವುದು ನಿಜವಾದ ಬರಹಗಾರನ ಲಕ್ಷಣವೆಂದು ಅವರು ಹೇಳಿದರು.







