ಜ.2ರಿಂದ ರಾಷ್ಟ್ರಮಟ್ಟದ ಖಾದಿ ಉತ್ಸವ: ಯಲುವಹಳ್ಳಿ ಎನ್.ರಮೇಶ್
ಬೆಂಗಳೂರು, ಡಿ.30: ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ವಜ್ರ ಮಹೋತ್ಸವದ ಪ್ರಯುಕ್ತ ಜ.2 ರಿಂದ 31ರವರೆಗೆ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ರಾಷ್ಟ್ರಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ‘ಖಾದಿ ಉತ್ಸವ-2018’ ಅನ್ನು ಆಯೋಜಿಸಲಾಗಿದೆ ಎಂದು ಮಂಡಳಿಯ ಅಧ್ಯಕ್ಷ ಯಲುವಹಳ್ಳಿ ಎನ್.ರಮೇಶ್ ತಿಳಿಸಿದರು.
ಶನಿವಾರ ನಗರದ ಜಸ್ಮಾಭವನ ರಸ್ತೆಯಲ್ಲಿರುವ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜ.2ರಂದು ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖಾದಿ ಉತ್ಸವವನ್ನು ಹಾಗೂ ಸಣ್ಣ ಕೈಗಾರಿಕೆ ಸಚಿವ ಡಾ.ಎಂ.ಸಿ.ಮೋಹನ್‌ಕುಮಾರಿ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ ಎಂದರು.
ಈ ಉತ್ಸವದಲ್ಲಿ ನಮ್ಮ ರಾಜ್ಯದ 116 ಮಳಿಗೆಗಳು ಸೇರಿದಂತೆ ಆಂಧ್ರಪ್ರದೇಶ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಹರಿಯಾಣ, ಮಹಾರಾಷ್ಟ್ರ, ಓಡಿಶಾ, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳದ ಒಟ್ಟು 203 ಮಳಿಗೆಗಳನ್ನು ತೆರೆಯಲಾಗುತ್ತಿದೆ ಎಂದು ಅವರು ಹೇಳಿದರು.
ಸುಮಾರು 8600 ಗ್ರಾಮ ಕೈಗಾರಿಕೆ ಘಟಕಗಳು ಕೆಲಸ ಮಾಡುತ್ತಿದ್ದು, 70 ಸಾವಿರ ಗ್ರಾಮೀಣ ಜನರ ಕೈಗಳಿಗೆ ಕೆಲಸ ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಉತ್ಪನ್ನವಾಗುವ ಈ ವಸ್ತುಗಳಿಗೆ ಮಾರುಕಟ್ಟೆ ಇರುವುದು ನಗರ ಪ್ರದೇಶಗಳಲ್ಲಿ. ಈ ಉತ್ಪನ್ನಗಳು ನಿರಂತರವಾಗಿ ಮಾರಾಟವಾದರೆ ಉತ್ಪನ್ನ ಮಾಡುವ ಗ್ರಾಮೀಣ ಕೈಗಳಿಗೆ ನಿರಂತರವಾಗಿ ಕೆಲಸ ಸಿಗುತ್ತದೆ ಎಂದು ರಮೇಶ್ ತಿಳಿಸಿದರು.
ಗ್ರಾಮೀಣ ಪ್ರದೇಶದಲ್ಲಿ ತಯಾರಾದ ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳನ್ನು ನಗರದ ಜನತೆಗೆ ಪರಿಚಯಿಸುವುದು, ಈ ಉತ್ಪನ್ನಗಳಿಗೆ ವ್ಯಾಪಕ ಪ್ರಚಾರ ನೀಡುವುದು, ಆ ಮೂಲಕ ಉದ್ದಿಮೆದಾರರ ಆರ್ಥಿಕ ಸ್ಥಿತಿಗತಿಗಳನ್ನು ಉತ್ತಮಪಡಿಸುವುದು ಮತ್ತು ಗ್ರಾಮೀಣ ವಲಸೆಯನ್ನು ತಡೆಗಟ್ಟುವುದು ವಸ್ತುಪ್ರದರ್ಶನಗಳನ್ನು ಏರ್ಪಡಿಸುವ ಮೂಲ ಉದ್ದೇಶವಾಗಿದೆ ಎಂದು ಅವರು ಹೇಳಿದರು.
2017ನೆ ಸಾಲಿನ ವಸ್ತುಪ್ರದರ್ಶನಕ್ಕೆ ಸುಮಾರು 2 ಲಕ್ಷ ಜನ ಭೇಟಿ ನೀಡಿದ್ದು 31 ಕೋಟಿ ರೂ.ಗಳ ವ್ಯವಹಾರ ನಡೆದಿತ್ತು. 2018ನೆ ಸಾಲಿನ ವಸ್ತುಪ್ರದರ್ಶನಕ್ಕೆ ಸುಮಾರು 2.50 ಲಕ್ಷ ಜನ ಭೇಟಿ ನೀಡುವ ನಿರೀಕ್ಷೆಯಿದ್ದು, 40 ಕೋಟಿ ರೂ.ಗಳವರೆಗೆ ವ್ಯವಹಾರ ನಡೆಯಬಹುದೆಂಬ ಅಂದಾಜಿದೆ ಎಂದು ರಮೇಶ್ ತಿಳಿಸಿದರು.
ಈ ವಸ್ತುಪ್ರದರ್ಶನಕ್ಕೆ ಗಣ್ಯ ವ್ಯಕ್ತಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭೇಟಿ ನೀಡುವುದರಿಂದ ಈ ಸಂದರ್ಭದಲ್ಲಿ ರಜಾ ದಿನಗಳಲ್ಲಿ ಸಂಜೆ ನಾಡಿನ ಸಂಸ್ಕೃತಿ, ಕಲೆ ಹಾಗೂ ಸಾಹಿತ್ಯವನ್ನು ಪ್ರತಿಬಿಂಬಿಸುವ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಾಗೂ ಖಾದಿ ಫ್ಯಾಷನ್ ಶೋ ಏರ್ಪಡಿಸಲಾಗುವುದು ಎಂದು ಅವರು ಹೇಳಿದರು.
ಖಾದಿ ಬ್ರಾಂಡಿಂಗ್: ರಾಜ್ಯ ಸರಕಾರವು ಖಾದಿ ಕ್ಷೇತ್ರದ ಉತ್ತಮ ಮಾರುಕಟ್ಟೆ, ತರಬೇತಿ, ವಿನೂತನ ವಿನ್ಯಾಸಗಳು, ಖಾದಿ ಕಾರ್ಯಕರ್ತರಿಗೆ ಕೌಶಲ್ಯ ತರಬೇತಿಯನ್ನು ನೀಡುವ ಮೂಲಕ ಖಾದಿಯಲ್ಲಿ ಸಮಗ್ರವಾದ ಬದಲಾವಣೆ ತರಲು ಖಾದಿ ಬ್ರಾಂಡಿಂಗ್ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ನಗರ ಜಿಲ್ಲೆಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ನಿರ್ದೇಶಕ ಸೋಮಶೇಖರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯವಿಭವಸ್ವಾಮಿ, ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿಯ ಶಿವಲಿಂಗಂ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವಸ್ತು ಪ್ರದರ್ಶನದಲ್ಲಿ ಅರಳೆ ಖಾದಿ, ರೇಶ್ಮೆ ಖಾದಿ, ಉಣ್ಣೆ ಬಟ್ಟೆಗಳು, ಖಾದಿ ಪಾಲಿವಸ್ತ್ರ ಬಟ್ಟೆಗಳು ಹಾಗೂ ಖಾದಿಯ ವೈವಿದ್ಯಮಯ ಉತ್ಪನ್ನಗಳ ಮೇಲೆ ಶೇ.35ರಷ್ಟು ರಿಯಾಯಿತಿ ಇರುತ್ತದೆ. ಮರದ ಕೆತ್ತನೆಯ ವಸ್ತುಗಳು, ಪೀಠೋಪಕರಣಗಳು, ನೈಸರ್ಗಿಕ ಸೆಣಬಿನ ಉತ್ಪನ್ನಗಳು, ಪಾದರಕ್ಷೆಗಳು, ಕುಂಬಾರಿಕೆಯ ಕುಶಲ ವಸ್ತುಗಳು, ಕೈ ಚೀಲಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳು, ಕೈ ಕಾಗದ ವಸ್ತುಗಳು, ಶುದ್ಧ ಜೇನುತುಪ್ಪ, ಗೋಡಂಬಿ ಹಾಗೂ ಔಷಧೀಯ ಉತ್ಪನ್ನಗಳು ಲಭ್ಯವಿರುತ್ತವೆ.
-ಯಲುವಹಳ್ಳಿ ಎನ್.ರಮೇಶ್, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷ







