ಮುಂಬೈ ಅಗ್ನಿ ದುರಂತಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ

ಮುಂಬೈ, ಡಿ. 30: ಮುಂಬೈನ ಕಮಲಾ ಮಿಲ್ಸ್ ಕಾಂಪೌಂಡ್‌ನಲ್ಲಿ ಬೆಂಕಿ ಅವಘಡ ಸಂಭವಿಸಲು ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಮುಂಬೈ ಪೊಲೀಸರ ತನಿಖೆ ಬಹಿರಂಗಪಡಿಸಿದೆ.
ಶೆಡ್‌ಗೆ ಹಾಕಲಾಗಿದ್ದ ದಹನಕಾರಿ ಟರ್ಪಾಲಿನ್ ಶೀಟ್‌ಗಳು ಬೆಂಕಿ ಹಬ್ಬಲು ಕಾರಣವಾಯಿತು ಎಂದು ಕೂಡ ತನಿಖೆ ತಿಳಿಸಿದೆ.
ಪಬ್‌ಗೆ ಬಳಸಲಾಗಿದ್ದ ಟರ್ಪಾಲಿನ್ ಶೀಟ್ ದಹನಕಾರಿ. ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ ಟರ್ಪಾಲಿಗೆ ಬೆಂಕಿ ಹತ್ತಿಕೊಂಡಿರುವುದರಿಂದ ಪೂರ್ಣ ಪಬ್ ಬೆಂಕಿಗಾಹುತಿಯಾಯಿತು ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಶುಕ್ರವಾರ ಮುಂಜಾನೆ ಸಂಭವಿಸಿದ ಅಗ್ನಿ ದುರಂತಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ನಮ್ಮ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪ್ರತ್ಯಕ್ಷದರ್ಶಿಗಳು ಇದೇ ಕಾರಣ ಹೇಳಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮುಂಬೈ ಅಗ್ನಿ ದುರಂತ: ಆರೋಪಿಗಳಿಗೆ ಲುಕೌಟ್ ನೊಟೀಸ್
ಮುಂಬೈನ ಕಮಲಾ ಮಿಲ್ಸ್ ಕಾಂಪೌಂಡ್ ಅಗ್ನಿ ದುರಂತಕ್ಕೆ ಕಾರಣರಾದ ಆರೋಪಿಗಳ ಶೋಧಕ್ಕಾಗಿ ವಿವಿಧ ರಾಜ್ಯಗಳಿಗೆ ಪೊಲೀಸ್ ತಂಡಗಳನ್ನು ಕಳುಹಿಸಲಾಗಿದೆ. ಆರೋಪಿಗಳು ದೇಶ ಬಿಟ್ಟು ಹೋಗದಂತೆ ಲುಕೌಟ್ ನೋಟಿಸ್ ಅನ್ನು ಕೂಡ ಜಾರಿಗೊಳಿಸಲಾಗಿದೆ.
‘ವನ್ ಅಬೊವ್’ ಪಬ್‌ನ ಮಾಲಿಕ ಹಾಗೂ ಇತರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವನ್ ‘ಅಬೊವ್ ಪಬ್’ ಅನ್ನು ನಿರ್ವಹಿಸುತ್ತಿದ್ದ ಸಿಗ್ರಿಡ್ ಓಸ್ಪಿಟಾಲಿಟಿ ಆ್ಯಂಡ್ ಎಂಟರ್‌ಟೈನ್‌ಮೆಂಟ್‌ನ ಹೃತೇಶ್ ಸಿಂಘ್ವಿ, ಜಿಗರ್ ಸಿಂಘ್ವಿ ಹಾಗೂ ಅಭಿಜಿತ್ ಮಂಕಾ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ವನ್ ಅಬೊವ್’ಗೆ ತಾಗಿಕೊಂಡಿರುವ ರೆಸ್ಟೋರೆಂಟ್ ಮೋಜೊ ಬ್ರಿಸ್ಟ್ರೋಗೆ ಕ್ಲೀನ್ ಚಿಟ್ ನೀಡಲಾಗಿದೆ. ಮೇಲ್ನೋಟಕ್ಕೆ ಬೆಂಕಿ ‘ವನ್ ಅಬೊವ್’ನಲ್ಲಿ ಕಾಣಿಸಿಕೊಂಡಿತು ಎಂದು ನಂಬಲಾಗಿದೆ ಎಂದು ಮೂಲಗಳು ತಿಳಿಸಿವೆ.







