ಬೆಂಗಳೂರು: ಪ್ರಕೃತಿ-ಸಂಸ್ಕೃತಿ ರಕ್ಷಿಸುವ ಜವಾಬ್ದಾರಿ ಮಕ್ಕಳದು; ರಾಷ್ಟ್ರಪತಿ ರಾಮನಾಥ್ ಕೋವಿಂದ್

ಬೆಂಗಳೂರು, ಡಿ.30: ಇಂದಿನ ಮಕ್ಕಳು ಪ್ರಕೃತಿ ಹಾಗೂ ಸಂಸ್ಕೃತಿಯನ್ನು ರಕ್ಷಿಸಿ, ಪೋಷಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಲಹೆ ನೀಡಿದ್ದಾರೆ.
ಶನಿವಾರ ನಗರದ ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ಆಯೋಜಿಸಿದ್ದ ಅದಮ್ಯ ಚೇತನ ಸೇವಾ ಉತ್ಸವ ಹಾಗೂ ನ್ಯಾಷನಲ್ ಹೈಸ್ಕೂಲ್ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತದಲ್ಲಿ ಮೊದಲಿನಿಂದಲೂ ಪ್ರಕೃತಿಯನ್ನು ಆರಾಧಿಸುವ ಸಂಪ್ರದಾಯವಿದೆ. ಅದರಂತೆ ಪ್ರತಿಯೊಬ್ಬರೂ ಪ್ರಕೃತಿ ಬಗ್ಗೆ ಕಾಳಜಿ ಹಾಗೂ ಜವಾಬ್ದಾರಿಯನ್ನು ವಹಿಸಿಕೊಂಡು ಕಾಪಾಡಬೇಕು ಎಂದು ಹೇಳಿದರು.
ಇಂದಿನ ಮಕ್ಕಳಿಂದ ಮಾತ್ರ ಪ್ರಕೃತಿ ಹಾಗೂ ಸಂಸ್ಕೃತಿಯನ್ನು ರಕ್ಷಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳು ಶಿಕ್ಷಣದ ಜೊತೆಗೆ, ಸುತ್ತಮುತ್ತಲಿನ ಪರಿಸರವನ್ನು ಕಾಪಾಡುವ ಹಾಗೂ ರಕ್ಷಿಸಲು ಪಣ ತೊಡಬೇಕು ಎಂದು ಸಲಹೆ ನೀಡಿದರು.
ಕಲಿಕೆ ಹಾಗೂ ಶಿಕ್ಷಣದ ಜತೆಗೆ ಸಮಾಜಕ್ಕೆ ಕಲಿತಿದ್ದನ್ನು ವಾಪಸ್ ನೀಡುವಂತಹ ಮಹತ್ತರ ಸಮಾರಂಭದಲ್ಲಿಂದು ಪಾಲ್ಗೊಳ್ಳುತ್ತಿದ್ದೇನೆ. ಅದಮ್ಯ ಚೇತನದ ಸೇವೆ ನ್ಯಾಷನಲ್ ಶಿಕ್ಷಣ ಸೊಸೈಟಿಯ ನೂರು ವರ್ಷಗಳ ಸೇವೆಯನ್ನು ಸ್ಮರಿಸುವಂತಹ ಈ ಸಮಾರಂಭದಲ್ಲಿ ಅದಮ್ಯ ಚೈತನ್ಯ ಅನ್ನ, ಅಕ್ಷರ ಹಾಗೂ ಆರೋಗ್ಯಕ್ಕಾಗಿ ತನ್ನನ್ನು ಮುಡುಪಾಗಿಟ್ಟುಕೊಂಡಿದೆ ಎಂದು ಶ್ಲಾಘಿಸಿದರು.
ಅಖಿಲ ಭಾರತ ಕಾಂಗ್ರೆಸ್ ಸಂಸ್ಥಾಪಕಿ ಅನಿಬೆಸೆಂಟ್ ಅವರ ಕೂಸಾಗಿರುವ ನ್ಯಾಷನಲ್ ಹೈಸ್ಕೂಲ್ ದೇಶ ಕಟ್ಟುವ ಕೆಲಸ ಮಾಡುತ್ತಿದೆ. ಈ ಶಾಲೆಗೆ 1936 ರಲ್ಲಿ ಮಹಾತ್ಮಾಗಾಂಧೀಜಿ ಭೇಟಿ ನೀಡಿದ್ದರು ಎಂಬುದನ್ನು ಅರಿತಿದ್ದೇನೆ. ಅಂದಿನ ಭೇಟಿ ಸಂದರ್ಭದಲ್ಲಿ 16 ವರ್ಷದ ವಿದ್ಯಾರ್ಥಿಯಾಗಿದ್ದ ಹೊಸೂರು ನರಸಿಂಹಯ್ಯ ಗಾಂಧೀಜಿ ಅವರ ಹಿಂದಿ ಭಾಷಣವನ್ನು ಕನ್ನಡಕ್ಕೆ ತರ್ಜುಮೆ ಮಾಡಿದರು ಎಂದು ಕೇಳಲ್ಪಟ್ಟಿದ್ದೇನೆ. ನರಸಿಂಹಯ್ಯ ಅಂತಹ ಸಾಧಕರು, ಪ್ರತಿಭಾವಂತರನ್ನು ರೂಪಿಸಿದ್ದ ಕೀರ್ತಿ ನ್ಯಾಷನಲ್ ಶಾಲೆಗೆ ಸಲ್ಲುತ್ತದೆ ಎಂದು ರಾಮನಾಥ್ ಕೋವಿಂದ್ ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿ ರೂಢಾಬಾಯಿ ವಾಲಾ, ಅದಮ್ಯ ಚೇತನದ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್, ನ್ಯಾಷನಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎ.ಎಚ್.ರಾಮರಾವ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
1 ಲಕ್ಷ ಕೋಟಿ ಸಸಿ:
ಅದಮ್ಯ ಚೇತನ ಪ್ರಕೃತಿ ಹಾಗೂ ಸಂಸ್ಕೃತಿ ರಕ್ಷಣೆಯತ್ತ ಗಮನ ನೀಡುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಹೊಸ ವರ್ಷದ ಆರಂಭದಿಂದ ಪ್ರಾರಂಭಿಸಿ ಒಂದು ವರ್ಷದಲ್ಲಿ 1 ಲಕ್ಷದಷ್ಟು ಗಿಡ ನೆಡುವ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಕೇಂದ್ರ ಸಚಿವ ಅನಂತಕುಮಾರ್ ತಿಳಿಸಿದರು.







