ಉ.ಪ್ರದೇಶ: ಮುಖ್ಯಮಂತ್ರಿ ಕಾರಿನೆದುರು ಜಿಗಿಯಲು ಯತ್ನಿಸಿದ ವ್ಯಕ್ತಿಯ ಬಂಧನ

ಲಕ್ನೊ, ಡಿ.30: ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಪ್ರಯಾಣಿಸುತ್ತಿದ್ದ ಕಾರಿನ ಮುಂಭಾಗಕ್ಕೆ ಜಿಗಿಯಲು ಪ್ರಯತ್ನಿಸಿದ ವ್ಯಕ್ತಿಯೋರ್ವನನ್ನು ಭದ್ರತಾ ಪಡೆಗಳು ಬಂಧಿಸಿದ ಘಟನೆ ವರದಿಯಾಗಿದೆ.
ಸೋನೆಭದ್ರ ಜಿಲ್ಲೆಯ ಶ್ಯಾಮ್‌ಜಿ ಮಿಶ್ರ(30 ವರ್ಷ) ಬಂಧಿತ ವ್ಯಕ್ತಿ. ಬಿಜೆಪಿ ಮುಖಂಡರು ನಡೆಸುತ್ತಿದ್ದಾರೆ ಎನ್ನಲಾದ ಅಕ್ರಮ ಗಣಿಗಾರಿಕೆ ಪ್ರಕರಣದ ಬಗ್ಗೆ ಮುಖ್ಯಮಂತ್ರಿಯವರ ಗಮನ ಸೆಳೆಯಬೇಕೆಂದು ತಾನು ಹೀಗೆ ಮಾಡಿರುವುದಾಗಿ ಮಿಶ್ರ ತಿಳಿಸಿದ್ದಾನೆ. ತಮ್ಮ ಕಚೇರಿಯಲ್ಲಿ ನಡೆಯಬೇಕಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಆಗಮಿಸಿದಾಗ, ಕಚೇರಿಯ ಗೇಟಿನ ಬಳಿಯಿದ್ದ ಮಾಧ್ಯಮ ಪ್ರತಿನಿಧಿಗಳ ಜೊತೆ ಸೇರಿಕೊಂಡಿದ್ದ ಮಿಶ್ರ ಈ ಪ್ರಯತ್ನ ನಡೆಸಿದ್ದು ಆತನನ್ನು ತಕ್ಷಣ ಭದ್ರತಾ ಪಡೆಗಳು ಬಂಧಿಸಿವೆ.
ಮುಖ್ಯಮಂತ್ರಿಯ ಕಾರಿನ ಹಿಂದಿನಿಂದ ರಾಜ್ಯಪಾಲ ರಾಮ ನಾಯ್ಕ್, ಉಪಮುಖ್ಯಮಂತ್ರಿ ದಿನೇಶ್ ಶರ್ಮ, ರಾಜ್ಯಕ್ಕೆ ಭೇಟಿ ನೀಡಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಕಾರುಗಳಿದ್ದವು ಎಂದು ಮೂಲಗಳು ತಿಳಿಸಿವೆ.
Next Story





