ಉತ್ತಮ ಆಡಳಿತ ನೀಡುವ ಸಲುವಾಗಿ ಉನ್ನತ ಹುದ್ದೆಗಳ ನೇಮಕದಲ್ಲಿ ಮಹಿಳೆಯರಿಗೆ ಆದ್ಯತೆ
ಸಾಧನಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ

ಕೋಲಾರ, ಡಿ.30: ಸಮಾನತೆ ತರುವ ದೃಷ್ಟಿಯಿಂದ ರಾಜ್ಯ ಸರಕಾರ ದಲಿತ ಅಧಿಕಾರಿಯೊಬ್ಬರನ್ನು ರಾಜ್ಯದ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.
ಮಹಿಳೆಯರು ಉನ್ನತ ಹುದ್ದೆಯಲ್ಲಿದ್ದರೆ ಆಡಳಿತದ ಮೇಲೆ ಹಿಡಿತ ಸಾಧ್ಯವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯ ಸರಕಾರದ ಸಾಧನಾ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ಶನಿವಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಕಿಸಾನ್ ಆಗ್ರೋ ಮೈದಾನದಲ್ಲಿ ಏರ್ಪಡಿಸಿದ್ದ 803 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ-ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪುರುಷ ಮತು ಮಹಿಳೆಯರ ಮಧ್ಯೆ ಸಮಾನತೆ ತರುವ ಉದ್ದೇಶದಿಂದ ರಾಜ್ಯ ಸರಕಾರ ಉನ್ನತ ಹುದ್ದೆಗಳಲ್ಲಿ ಮಹಿಳೆಯರಿಗೆ ಆದ್ಯತೆ ನೀಡುತ್ತಿದೆ. ಕೋಲಾರ ಜಿಲ್ಲೆಯ ಡಿಸಿ, ಎಸ್ಪಿ, ಸಿಇಒ ಸೇರಿದಂತೆ ಬಹುತೇಕ ಉನ್ನತ ಹುದ್ದೆಗಳಲ್ಲಿ ಮಹಿಳಾ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು.
ಯಾವುದೇ ಚುನಾಯಿತ ಪ್ರತಿನಿಧಿಗಳು ಅಧಿಕಾರ ಅನುಭವಿಸಲು ಬರುವುದಲ್ಲ, ಜನರ ಸೇವೆ ಮಾಡಲು ಎಂಬುದನ್ನು ಎಲ್ಲರೂ ಅರಿಯಬೇಕು ಎಂದ ಸಿಎಂ, ಮಹಿಳೆಯರು ಸಮಾಜದಲ್ಲಿ ಅವಕಾಶ ವಂಚಿತರಾಗಿದ್ದಾರೆ. ಯಾರೂ ಅವರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸುವುದಿಲ್ಲ. ಇಂತವರನ್ನು ಗುರುತಿಸಿ ಮುಖ್ಯವಾಹಿನಿ ತರಲು ಶ್ರಮಿಸುತ್ತಿರುವ ವ್ಯಕ್ತಿ ಆರೋಗ್ಯ ಸಚಿವ ಕೆ.ಆರ್.ರಮೇಶ ಕುಮಾರ್ ಎಂದು ಸ್ಮರಿಸಿದರು.
ಕೆ.ಆರ್.ರಮೇಶ್ ಕುಮಾರ್ ಎಂದೂ ತಮ್ಮ ವೈಯಕ್ತಿಕ ವಿಚಾರಗಳಿಗೆ ಯಾವತ್ತೂ ನನ್ನ ಬಳಿಗೆ ಬಂದಿಲ್ಲ. ಜನರ ಸಮಸ್ಯೆಗಳು, ಕ್ಷೇತ್ರದ ಅಭಿವೃದ್ಧಿ ವಿಚಾರಗಳಿಗಷ್ಟೇ ನನ್ನ ಬಳಿಗೆ ಬಂದಿದ್ದಾರೆ. ಅವರೊಬ್ಬ ಮೇದಾವಿ ಹಾಗೂ ನನಗಿಂತಲೂ ಬುದ್ಧ್ದಿವಂತ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬರಪೀಡಿತ ಪ್ರದೇಶಕ್ಕೆ ನೀರು ಒದಗಿಸುವ ಎತ್ತಿನಹೊಳೆ ಯೋಜನೆ ರದ್ದು ಮಾಡುತ್ತೇನೆ ಎಂದು ಮಿಸ್ಟರ್ ಕುಮಾರಸ್ವಾಮಿ ಹೇಳುತ್ತಿದ್ದಾರೆ. ಇದನ್ನು ಅವರು ಯಾಕೆ ಹೇಳಿದ್ದಾರೆ ಅಂತ ತಿಳಿಯುತ್ತಿಲ್ಲ. ಎತ್ತಿನಹೊಳೆ ಯೋಜನೆಗೆ ರಾಜ್ಯ ಸರಕಾರ 13 ಸಾವಿರ ಕೋಟಿ ರೂ. ಖರ್ಚು ಮಾಡುತ್ತಿದೆ. ಈಗಾಗಲೇ 2,500 ಕೋಟಿ ರೂ. ವೆಚ್ಚ ಮಾಡಲಾಗಿದೆ. ಬರದ ಬೇಗೆಯಲ್ಲಿ ಬೇಯುತ್ತಿರುವ ಈ ಪ್ರದೇಶಕ್ಕೆ ಕುಡಿಯುವ ನೀರು ಕೊಡಲು ವಿರೋಧಿಸುವ ಕುಮಾರಸ್ವಾಮಿ ಅವರು, ತಾನು ಅಧಿಕಾರಕ್ಕೆ ಬಂದರೆ ಯೋಜನೆ ರದ್ದು ಮಾಡುತ್ತೇನೆ ಎಂದು ಹೇಳಿದ್ದಾರೆ, ಇದಕ್ಕೆ ನೀವೇನಂತೀರಿ ಎಂದು ಸಭೆಯಲ್ಲಿದ್ದ ಸಾರ್ವಜನಿಕರನ್ನು ಪ್ರಶ್ನಿಸಿದ ಸಿಎಂ, ಜೆಡಿಎಸ್‌ಗೆ ಮತ ಹಾಕಲ್ಲ ಎಂದು ಹೇಳಿ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆರೋಗ್ಯ ಸಚಿವ ಕೆ.ಆರ್.ರಮೇಶ್ ಕುಮಾರ್, ಹಸಿದವನಿಗೆ ಮಾತ್ರ ಹಸಿವಿನ ಮಹತ್ವ ಗೊತ್ತೇ ಹೊರತು, ಹೊಟ್ಟೆ ತುಂಬಿದ ವ್ಯಕ್ತಿಗೆ ಬಡವರ ಕಷ್ಟ ಗೊತ್ತಾಗುವುದಿಲ್ಲ, ಹಸಿದ ವ್ಯಕ್ತಿ ಮಂದಿರ-ಮಸೀದಿಗೆ ಹೋಗುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಗೆ ತಿರುಗೇಟು ನೀಡಿದರು.
ಆರೋಪ - ಪ್ರತ್ಯಾರೋಪಗಳ ಮೂಲಕ ಕೆಲವರು ಭಾಷೆಯ ಗೌರವವನ್ನೇ ಕಳೆಯುತ್ತಿದ್ದಾರೆ. ಅಧಿಕಾರ ಎಂದರೆ ಜವಾಬ್ದಾರಿಯ ನಿರ್ವಹಣೆ. ಅಧಿಕಾರ ಬೇರೆ, ಜವಾಬ್ದಾರಿ ಬೇರೆ ಎಂದ ಅವರು, ಎತ್ತಿನಹೊಳೆ ಯೋಜನೆ ನಿಲ್ಲಿಸುವೆ ಎಂಬ ಕುಮಾರಸ್ವಾಮಿಗೆ ತಮ್ಮ ಮನೆಯ ಕೊಳವೆಬಾವಿ ಒಣಗಿದ್ದರೆ ಗೊತ್ತಾಗುತ್ತಿತ್ತು ಎಂದು ವಾಗ್ದಾಳಿ ನಡೆಸಿದರು.
ಕಾರ್ಯಕ್ರಮದಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಸಂಸದ ಕೆ.ಎಚ್.ಮುನಿಯಪ್ಪ, ಜಿಲ್ಲಾಧಿಕಾರಿ ಸತ್ಯವತಿ, ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ನಝೀರ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯದ ಎಲ್ಲ ವರ್ಗದ ಜನರಿಗೆ ಸಮಾನತೆ ಕಲ್ಪಿಸುವ ದೃಷ್ಟಿಯಿಂದ ’ವಿಷನ್ ಕರ್ನಾಟಕ-2025 ಯೋಜನೆ’ ಮೂಲಕ ನಾಂದಿ ಹಾಡಲಾಗಿದೆ. ನವಕರ್ನಾಟಕ ನಿರ್ಮಾಣಕ್ಕೆ ರಾಜ್ಯದಲ್ಲಿ ಯಾವ ಯಾವ ಯೋಜನೆಗಳನ್ನು ಜಾರಿ ಮಾಡಬೇಕೆಂಬುದಕ್ಕೆ ರಾಜ್ಯಾದ್ಯಂತ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ
ಒಂದು ಬ್ಯಾನರ್ - ಒಂದು ಪ್ಲೆಕ್ಸ್ ಇಲ್ಲ:
ಶ್ರೀನಿವಾಸ ಪುರ ಕ್ಷೇತ್ರ ರಾಜ್ಯ ಮತು ದೇಶಕ್ಕೆ ಮಾದರಿ. ಸಾಧನಾ ಸಮಾವೇಶಕ್ಕೆ ಎಲ್ಲಿಯೂ ಒಂದು ಬ್ಯಾನರ್ ಹಾಗೂ ಪ್ಲೆಕ್ಸ್ ಹಾಕಿಲ್ಲ. ಬಟಿಂಗ್ಸ್ ಕಟ್ಟಿಲ್ಲ. ಕ್ಷೇತ್ರದ ಜನತೆ ಜಾತಿ ಮತಗಳನ್ನು ಮೀರಿ ದೊಡ್ಡ ಸಂಖ್ಯೆಯಲ್ಲಿ ಜನರು ಬಂದಿದ್ದು, ಒಂದು ನಯಾಪೈಸೆ ಖರ್ಚು ಮಾಡದೇ ಈ ಸಮಾವೇಶ ಯಶಸ್ವಿಯಾಗಿ ನಡೆಸಿದ್ದೇವೆ
-ಕೆ.ಆರ್.ರಮೇಶ್ ಕುಮಾರ್,ಆರೋಗ್ಯ ಸಚಿವ







