ಹಣಕಾಸು ಪರಿಸ್ಥಿತಿ ಮತ್ತು ದಿವಾಳಿತನ ಸಂಹಿತೆ ತಿದ್ದುಪಡಿ ಮಸೂದೆ ಅಂಗೀಕಾರ

ಹೊಸದಿಲ್ಲಿ, ಡಿ.30: ಸುಸ್ತಿದಾರರ ಮೇಲೆ ನಿಯಂತ್ರಣ ಹೇರುವ ಸಲುವಾಗಿ ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಹಣಕಾಸು ಪರಿಸ್ಥಿತಿ ಮತ್ತು ದಿವಾಳಿತನ ಸಂಹಿತೆ ತಿದ್ದುಪಡಿ ಮಸೂದೆಗೆ ಶನಿವಾರದಂದು ಲೋಕಸಭೆಯಲ್ಲಿ ಅಂಗೀಕಾರ ದೊರಕಿದೆ. ಈ ಹಿಂದೆಯಿದ್ದ ಮಸೂದೆಯ ಲೋಪದೋಷಗಳನ್ನು ಬಳಸಿ ಸಾಲಗಾರರು ಆರಾಮವಾಗಿರುತ್ತಿದ್ದರು ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ಹಣಕಾಸು ಪರಿಸ್ಥಿತಿ ಪ್ರಕ್ರಿಯೆಯಡಿ ಸಾಲಗಾರರು ಬಡ್ಡಿಯನ್ನು ಪಾವತಿಸಿದ ನಂತರ ಮತ್ತು ಅವರ ನಿರ್ವಹಣೆಯಿಲ್ಲದ ಸಾಲದ ಖಾತೆಯನ್ನು ಮತ್ತೆ ಕಾರ್ಯಗತಗೊಳಿಸುವ ಮೂಲಕ ಹರಾಜು ಪ್ರಕ್ರಿಯೆಯಲ್ಲಿ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು ಎಂದು ಸಚಿವರು ತಿಳಿಸಿದ್ದಾರೆ.
ಹಣಕಾಸು ಪರಿಸ್ಥಿತಿ ಮತ್ತು ದಿವಾಳಿತನ ಸಂಹಿತೆ ತಿದ್ದುಪಡಿ ಮಸೂದೆ 2017ನ್ನು ಧ್ವನಿಮತದ ಮೂಲಕ ಲೋಕಸಭೆಯಲ್ಲಿ ಅಂಗೀಕರಿಸಿದ ನಂತರ ಮಾತನಾಡಿದ ಜೇಟ್ಲಿ, ಸಾಲದ ಒಂದು ಭಾಗವನ್ನು ಪಾವತಿಸಿದ ನಂತರ ಸುಸ್ತಿದಾರರು ಆರಾಮವಾಗಿ ಸುತ್ತಾಡಲು ಸರಕಾರ ಬಿಡುವುದಿಲ್ಲ ಎಂದು ತಿಳಿಸಿದರು. ಈ ಮಸೂದೆಯು ಸಾಲಗಾರರು ಹಿಂದಿನ ಮಸೂದೆಯ ಲೋಪದೋಷಗಳನ್ನು ತಮ್ಮ ಲಾಭಕ್ಕಾಗಿ ಬಳಸುವುದನ್ನು ತಡೆಯಲು ನವೆಂಬರ್‌ನಲ್ಲಿ ಘೋಷಿಸಲಾಗಿದ್ದ ಸುಗ್ರೀವಾಜ್ಞೆಯನ್ನು ತೆಗೆದುಹಾಕಲಿದೆ.
ಉದ್ದೇಶಪೂರ್ವಕ ಸುಸ್ತಿದಾರರು ಮತ್ತು ನಿರ್ವಹಣೆಯಿಲ್ಲದ ಖಾತೆಯೆಂದು ವ್ಯಾಖ್ಯಾನಿಸಲಾಗಿರುವ ಆಸ್ತಿ ಅಥವಾ ವ್ಯಕ್ತಿಗಳು ಈ ಮಸೂದೆಯ ಪ್ರಕಾರ ಹರಾಜಿನಲ್ಲಿ ಭಾಗಿಯಾಗಲು ಅನರ್ಹರಾಗಿರುತ್ತಾರೆ. ಆದರೆ ಈ ಸುಸ್ತಿದಾರರು ತಮ್ಮ ನಿರ್ವಹಣೆಯಿಲ್ಲದ ಖಾತೆಗಳಿಗೆ ಸಂಬಂಧಪಟ್ಟಂತೆ ಎಲ್ಲ ಬಾಕಿ ಮೊತ್ತವನ್ನು ಮರುಪಾವತಿಸಿದರೆ ಮತ್ತೆ ತಮ್ಮ ಪರಿಹಾರೋಪಾಯವನ್ನು ಒಪ್ಪಿಸಲು ಅರ್ಹರಾಗುತ್ತಾರೆ ಎಂದು ಜೇಟ್ಲಿ ತಿಳಿಸಿದರು.
ನವೆಂಬರ್ 23ಕ್ಕೂ ಮೊದಲು ಹಣಕಾಸು ಪರಿಸ್ಥಿತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವ ಸುಸ್ತಿದಾರರು ಇನ್ನೊಂದು ತಿಂಗಳಲ್ಲಿ ತಮ್ಮ ಸಾಲವನ್ನು ಮರುಪಾವತಿಸಿದರೆ ಒತ್ತಡದ ಆಸ್ತಿಯ ಹರಾಜಿನಲ್ಲಿ ಪಾಲ್ಗೊಳ್ಳಬಹುದಾಗಿದೆ. ಇದೇ ವೇಳೆ ನಿರ್ವಹಣೆಯಿಲ್ಲದ ಆಸ್ತಿಗಳು ಪರಂಪರೆಯ ಸಮಸ್ಯೆಯಾಗಿದ್ದು ಯುಪಿಎ ಸರಕಾರದ ಅವಧಿಯಲ್ಲಿ ಮಿತಿಯಿಲ್ಲದೆ ಬ್ಯಾಂಕ್‌ಗಳು ಸಾಲ ನೀಡಿದ ಪರಿಣಾಮವಾಗಿದೆ ಎಂದು ಜೇಟ್ಲಿ ಆರೋಪಿಸಿದರು.







