ಐದು ವರ್ಷಗಳಲ್ಲಿ 515ಕೋಟಿ ರೂ. ವೆಚ್ಚದ ಕಾಮಗಾರಿ ಪೂರ್ಣ: ಸಚಿವ ಪ್ರಮೋದ್

ಉಡುಪಿ, ಡಿ.30: ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2013- 14ನೆ ಸಾಲಿನಿಂದ 2017-18ನೆ ಸಾಲಿನವರೆಗೆ ಒಟ್ಟು 515 ಕೋಟಿ ರೂ. ವೆಚ್ಚದ 4481 ಕಾಮಗಾರಿಗಳು ಪೂರ್ಣಗೊಂಡಿದ್ದು, 139 ಕೋಟಿ ರೂ. ವೆಚ್ಚದ 453 ಕಾಮಗಾರಿಗಳು ಪ್ರಗತಿಯಲ್ಲಿವೆ. 163 ಕೋಟಿ ರೂ. ವೆಚ್ಚದ 424 ಕಾಮಗಾರಿ ಗಳು ಮಂಜೂರಾಗಿವೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಉಡುಪಿ ವಿಧಾನಸಭಾ ಕ್ಷೇತ್ರದ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. 286.48 ಕೋಟಿ ರೂ. ವೆಚ್ಚದ 2695 ರಸ್ತೆ ಕಾಮಗಾರಿಗಳು ಪೂರ್ಣಗೊಂಡಿದ್ದು, 58 ಕೋಟಿ ರೂ. ವೆಚ್ಚದ 305 ಕಾಮಗಾರಿಗಳು ಪ್ರಗತಿಯಲ್ಲಿವೆ. 342 ರಸ್ತೆ ಕಾಮಗಾರಿಗಳು ಮಂಜೂ ರಾಗಿದ್ದು, ಶೀಘ್ರವೇ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದರು.
30.98 ಕೋಟಿ ರೂ. ವೆಚ್ಚದಲ್ಲಿ 10 ಸೇತುವೆ ಕಾಮಗಾರಿ ಪೂರ್ಣ ಗೊಂಡಿದ್ದು, 20.45ಕೋಟಿ ರೂ. ವೆಚ್ಚದ ನಾಲ್ಕು ಕಾಮಗಾರಿ ಪ್ರಗತಿಯಲ್ಲಿವೆ. 27.25ಕೋಟಿ ರೂ. ವೆಚ್ಚದ ಎಂಟು ಸೇತುವೆ ಕಾಮಗಾರಿಗಳು ಮಂಜೂ ರಾಗಿವೆ. ಮಲ್ಪೆ ಬೀಚ್‌ಗೆ ಮೂಲಭೂತ ಸೌಕರ್ಯಕ್ಕೆ ಸಂಬಂಧಿಸಿ 6.55 ಕೋಟಿ ರೂ. ವೆಚ್ಚದ 26 ಕಾಮಗಾರಿಗಳು ಪೂರ್ಣಗೊಂಡಿದ್ದು, 1.77ಕೋಟಿ ರೂ. ವೆಚ್ಚದ 7 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಅವರು ತಿಳಿಸಿದರು.
ರಾ.ಹೆ.ಕಾಮಗಾರಿ: ಮಲ್ಪೆ- ಮಣಿಪಾಲ ರಾಷ್ಟ್ರೀಯ ಹೆದ್ದಾರಿ ದುರಸ್ತಿಗೆ ಜಿಲ್ಲಾಡಳಿತ 30ಲಕ್ಷ ರೂ. ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆ 30ಲಕ್ಷ ರೂ. ಅನುದಾನ ನೀಡಿದೆ. ಮಣಿಪಾಲದಿಂದ ಪರ್ಕಳದವರೆಗಿನ ದುರಸ್ತಿ ಕಾಮಗಾರಿ ಯನ್ನು ಜ.4ರಿಂದ ಆರಂಭಿಸಿ ವಾರದೊಳಗೆ ಪೂರ್ಣಗೊಳಿಸಲಾಗುವುದು. ಇದಕ್ಕೆ ಬೇಕಾದ ಅನುದಾನ ನಮ್ಮಲ್ಲಿ ಇದೆ ಎಂದು ರಾ.ಹೆ. ಇಲಾಖೆ ಅಧಿಕಾರಿಳು ಸಭೆಯಲ್ಲಿ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ದುರಸ್ತಿಗೆ ಕೇಂದ್ರದಿಂದ ಅನುದಾನ ಬಾರದಿದ್ದರೆ 2 ಕೋಟಿ ವಿಶೇಷ ಅನುದಾನ ನೀಡುವಂತೆ ಲೋಕೋಪಯೋಗಿ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಆದಿಉಡುಪಿ- ಪರ್ಕಳ ರಾ.ಹೆ. ಚತುಷ್ಪಥ ಕಾಮಗಾರಿಗೆ 87 ಕೋಟಿ ರೂ. ವೆಚ್ಚದ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಲಾಗಿದ್ದು, ಅನುದಾನ ಇಲ್ಲದ ಕಾರಣ ಎರಡನೆ ಹಂತದಲ್ಲಿ ಆದಿಉಡುಪಿ- ಮಲ್ಪೆ ಹೆದ್ದಾರಿಯನ್ನು ಚತು್ಪಥ ಗೊಳಿಸಲಾಗುವುದು ಎಂದರು.
ಪ್ರತಿ ದಿನ ಟ್ರಾಫಿಕ್ ಜಾಮ್ ಸಮಸ್ಯೆ ಹಾಗೂ ಮಲ್ಪೆ ಬೀಚ್‌ನಂತಹ ಪ್ರವಾಸಿ ತಾಣಕ್ಕೆ ಹೋಗುವ ಆದಿಉಡುಪಿ -ಮಲ್ಪೆ ರಸ್ತೆಯನ್ನು ಪ್ರಥಮ ಹಂತ ದಲ್ಲೇ ಅಭಿವೃದ್ದಿ ಪಡಿಸಬೇಕು ಎಂದು ಸಚಿವರು ಹೇಳಿದರು. ಆದರೆ ಅಧಿಕಾರಿ ಗಳು ಅನುದಾನದ ಕೊರತೆಯ ಸಮಸ್ಯೆಯನ್ನು ಸಚಿವರ ಮುಂದೆ ಹೇಳಿ ಕೊಂಡರು.
ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ಚಂದ್ರಶೇಖರ್, ಬಂದರು ಇಲಾಖೆಯ ಇಂಜಿನಿಯರ್ ದಯಾನಂದ, ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯ ಇಂಜಿನಿಯರ್ ಪ್ರತೀಶ್, ತಾಪಂ ಕಾರ್ಯ ನಿರ್ವಹಣಾಧಿಕಾರಿ ಮೋಹನ್‌ರಾಜ್ ಮೊದಲಾದವರು ಉಪಸ್ಥಿತರಿದ್ದರು.







