ಸರಕಾರಿ ಹಣದಲ್ಲಿ ಸಿಎಂ ದುಂದುವೆಚ್ಚದ ಪ್ರವಾಸ: ಎಚ್.ಡಿ.ದೇವೇಗೌಡ

ಬೆಂಗಳೂರು, ಡಿ.30: ರಾಜ್ಯ ಸರಕಾರದ ಹಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ದುಂದುವೆಚ್ಚದ ಪ್ರವಾಸ ಮಾಡುತ್ತಿದ್ದಾರೆ. ಇವರ ನೇತೃತ್ವದಲ್ಲಿ ನಡೆಯುತ್ತಿರುವ ನವ ಕರ್ನಾಟಕ ನಿರ್ಮಾಣ ಸಮಾವೇಶಕ್ಕೆ ಜನರೇ ಬರುತ್ತಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ವ್ಯಂಗ್ಯವಾಡಿದ್ದಾರೆ.
ಶನಿವಾರ ನಗರದ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಮಾವೇಶಕ್ಕೆ ಜನರು ಬಾರದೆ ಇರುವುದನ್ನು ನೋಡಿದರೆ ಈ ಸರಕಾರ ಕಳೆದ ನಾಲ್ಕೂವರೆ ವರ್ಷಗಳ ಆಡಳಿತದಲ್ಲಿ ಜನರ ವಿಶ್ವಾಸಗಳಿಸುವಲ್ಲಿ ವಿಫಲವಾಗಿರುವುದು ಸ್ಪಷ್ಟವಾಗುತ್ತದೆ ಎಂದರು.
ನವ ಕರ್ನಾಟಕ ನಿರ್ಮಾಣ ಮಾಡಲು ಇವರೊಬ್ಬರೇ ಹುಟ್ಟಿದ್ದಾರಾ? ಕಾಂಗ್ರೆಸ್ ಸರಕಾರದ ಸಾಧನೆಗಳನ್ನು ತಿಳಿಸುವ ಭರದಲ್ಲಿ ರಾಜ್ಯದ ಹಿಂದಿನ ಮುಖ್ಯಮಂತ್ರಿಗಳು ಏನು ಮಾಡಿಲ್ಲ ಎಂದು ಸಿದ್ದರಾಮಯ್ಯ ಬಿಂಬಿಸುತ್ತಿದ್ದಾರೆ. ನನ್ನ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಇವರು ಹಣಕಾಸು ಸಚಿವರಾಗಿ ಎಷ್ಟು ಕೆಲಸ ಮಾಡಿದ್ದಾರೆ ಅನ್ನೋದು ನನಗೆ ಗೊತ್ತು ಎಂದು ಅವರು ತಿರುಗೇಟು ನೀಡಿದರು.
ಮುಖ್ಯಮಂತ್ರಿ ಕತ್ತಿ, ಗುರಾಣಿ, ಖಡ್ಗ ಹಿಡಿದುಕೊಂಡು ಮಾತನಾಡಿದ್ದೆ ಮಾತನಾಡಿದ್ದು, ಅವರು ತಮ್ಮ ಬಿರುಸಿನ ಮಾತನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಲಿ. ಅವರ ಬಿರುಸಿನ ಮಾತಿಗೆ ಪ್ರತಿಕ್ರಿಯೆ ಕೊಡುವ ಶಕ್ತಿ ಈ ದೇವೇಗೌಡಗೆ ಇದೆ. ಇವರು ಮಾಡಿರುವ ಸಾಧನೆಗಳ ಕುರಿತು ಬಹಿರಂಗವಾಗಿ ಚರ್ಚಿಸಲು ನಾವು ಸಿದ್ಧವಿದ್ದೇವೆ ಎಂದು ಅವರು ಸವಾಲು ಹಾಕಿದರು.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರಪ್ಪನಾಣೆ ಯಾವತ್ತೂ ಮುಖ್ಯಮಂತ್ರಿಯಾಗಲ್ಲ, ಜಾಮೀನು ಪಡೆದುಕೊಂಡವರೆಲ್ಲ ಮುಖ್ಯಮಂತ್ರಿಯಾಗಲು ಸಾಧ್ಯವೇ? ಎಂದು ಸಿದ್ದರಾಮಯ್ಯ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಅಹಂಕಾರದ ಮಾತುಗಳನ್ನಾಡುವುದನ್ನು ನಿಲ್ಲಿಸುವುದು ಉತ್ತಮ ಎಂದು ದೇವೇಗೌಡ ಸಲಹೆ ನೀಡಿದರು.
ಕಾಂಗ್ರೆಸ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರದ್ದು ಪ್ರತ್ಯೇಕ ಯಾತ್ರೆಗಳು. ಆದರೆ, ಜೆಡಿಎಸ್ ಪರವಾಗಿ ನಾನು ಹಾಗೂ ಕುಮಾರಸ್ವಾಮಿ ಇಬ್ಬರು ಪ್ರವಾಸ ಮಾಡುತ್ತಿದ್ದೇವೆ. ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆಯುತ್ತಿರುವ ಪ್ರವಾಸ ಸರಕಾರಿ ಕಾರ್ಯಕ್ರಮವೋ ಅಥವಾ ಮುಂದಿನ ಚುನಾವಣೆಯ ಪ್ರಚಾರ ಕಾರ್ಯಕ್ರಮವೊ ಎಂಬುದನ್ನು ಗಮನಿಸಿದ್ದೇವೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷ ಕಳೆದ ಚುನಾವಣೆಯಲ್ಲಿ 120 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಸಿದ್ದರಾಮಯ್ಯ ನಾಯಕತ್ವದ ಗೆಲುವಲ್ಲ. ಈ ಬಾರಿ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯುವಷ್ಟು ಸ್ಥಾನಗಳನ್ನು ಗೆದ್ದು ತೋರಿಸಲಿ? ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ, ಸಿದ್ದರಾಮಯ್ಯರನ್ನೆ ಕಾಂಗ್ರೆಸ್‌ನ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಲಿ ನೋಡೋಣ ಎಂದು ದೇವೇಗೌಡ ಸವಾಲು ಹಾಕಿದರು.
ಬಿಜೆಪಿ ಕೈಯಲ್ಲಿ ಸಿಬಿಐ, ಕಾಂಗ್ರೆಸ್ ಕೈಯಲ್ಲಿ ಎಸಿಬಿಯಿದೆ. ಆದರೆ, ನಮ್ಮ ಕೈಯಲ್ಲಿ ಯಾವ ಅಧಿಕಾರವು ಇಲ್ಲ. ಹೀಗಾಗಿ ರಾಜ್ಯದಲ್ಲಿ ಪ್ರವಾಸ ಕೈಗೊಂಡು ಜನರ ಸಮಸ್ಯೆಗಳಿಗೆ ಧ್ವನಿಯಾಗುತ್ತೇವೆ. ನಮಗೆ ಹೋರಾಟದ ಕೆಚಿ್ಚದೆ ಎಂದು ದೇವೇಗೌಡ ಹೇಳಿದರು.
ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಯಾರೊಬ್ಬರ ಬಗ್ಗೆಯೂ ಲಘುವಾಗಿ ಮಾತನಾಡುವುದಿಲ್ಲ ಎಂದು ದೇವೇಗೌಡ ತಿಳಿಸಿದರು.
ಮಹಾದಾಯಿ ತಡೆಗೋಡೆ ರಕ್ಷಣೆ ನಮ್ಮ ಜವಾಬ್ದಾರಿ
ರಾಜಕೀಯ ಪಕ್ಷಗಳು ಪರಸ್ಪರ ದೋಷಾರೋಪ, ಕೆಸರೆರಚಾಟದಿಂದ ಮಹಾದಾಯಿ ನದಿ ನೀರು ಹಂಚಿಕೆ ವಿವಾದ ಇತ್ಯರ್ಥವಾಗುವುದಿಲ್ಲ. ಮಹಾದಾಯಿಗೆ ಕಟ್ಟಿರುವ ತಡೆಗೋಡೆಯ ರಕ್ಷಣೆ ಜವಾಬ್ದಾರಿ ಕರ್ನಾಟಕ ಸರಕಾರದ್ದು. ಅದು ಈಗಲೂ ಹಾಗೆ ಮುಂದುವರೆಯುತ್ತದೆ ಎಂದು ಭಾವಿಸಿದ್ದೇನೆ. ಅಗತ್ಯವಿದ್ದಲ್ಲಿ ಮತ್ತೊಮ್ಮೆ ಪ್ರಧಾನಿ ನರೇಂದ್ರಮೋದಿಯನ್ನು ಭೇಟಿಯಾಗಿ ಮನವಿ ಸಲ್ಲಿಸುತ್ತೇನೆ.
-ಎಚ್.ಡಿ.ದೇವೇಗೌಡ, ಜೆಡಿಎಸ್ ವರಿಷ್ಠ







