ಸಿದ್ದರಾಮಯ್ಯರಿಂದ ರಾಜ್ಯದ ಖಜಾನೆ ಲೂಟಿ: ಯಡಿಯೂರಪ್ಪ ಆರೋಪ

ಚಿಕ್ಕಮಗಳೂರು, ಡಿ.30: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಖಜಾನೆಯನ್ನು ಲೂಟಿ ಮಾಡುವ ಹಗಲು ದರೋಡೆಯಲ್ಲಿ ತೊಡಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು.
ಅವರು ಶನಿವಾರ ನಗರದ ಪಾಲಿಟೆಕ್ನಿಕ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪರಿವರ್ತನಾ ಯಾತ್ರೆಯನ್ನು ಉಧ್ಘಾಟಿಸಿ ಮಾತನಾಡಿದ ಯಡಿಯೂರಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಗಲು ದರೋಡೆಯಲ್ಲಿ ತೊಡಗುವ ಮೂಲಕ ರಾಜ್ಯದ ಖಜಾನೆಯ ಲೂಟಿ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಸ್ವಚ್ಚ ಭಾರತ್ ಯೋಜನೆಯಡಿ 790 ಕೋಟಿ ಅನುದಾನವನ್ನು ರಾಜ್ಯಕ್ಕೆ ಬಿಡುಗಡೆ ಮಾಡುವ ಮೂಲಕ ಈ ಅನುದಾನವನ್ನು ಸಮುದಾಯ ಮತ್ತು ವೈಯಕ್ತಿಕ ಶೌಚಾಲಯ, ಜೈವಿಕ ಅನಿಲ ಘಟಕಕ್ಕೆ ಬಳಸಲು ಸೂಚಿಸಿತ್ತು. ಆದರೆ ಮುಖ್ಯಮಂತ್ರಿ ಈ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದರು.
ಬಿಜೆಪಿ ಕಾರ್ಯಕರ್ತ ಈ ಪ್ರಕರಣದ ಸಂಬಂಧ ಲೋಕಾಯುಕ್ತ, ಎಸಿಬಿ ಹಾಗೂ ಸಿಬಿಐಗೆ ದೂರು ದಾಖಲು ಮಾಡಿದ್ದಾನೆ. ಈ ಪ್ರಕರಣದ ಸ್ಪಷ್ಟೀಕರಣ ನೀಡಬೇಕು. ಮಲಪ್ರಭ ಮತ್ತು ಘಟಪ್ರಭ ನಾಲೆ ಯೋಜನೆಗೆ ಹಿಂದಿನ ಅನುದಾನವನ್ನು ಏರಿಕೆ ಮಾಡಿ 1100 ಕೋಟಿ ರೂ.ಗಳಿಗೆ ಟೆಂಡರ್ ನೀಡಲು ಸಿದ್ದತೆ ನಡೆದಿದೆ. ಈ ಬಗ್ಗೆಯೂ ಕೂಡಾ ಸಮಗ್ರ ತನಿಖೆಯಾಗಬೇಕು. ನಾನು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಭಾಗ್ಯಲಕ್ಷ್ಮೀ ಯೋಜನೆಯನ್ನು ಬಜೆಟ್‍ನಲ್ಲಿ ಘೋಷಣೆ ಮಾಡಲು ಅಧಿಕಾರಿಗಳು ವಿರೋಧ ವ್ಯಕ್ತಪಡಿಸಿದರೂ ಕೇಳದೇ ಯೋಜನೆಯನ್ನು ಜಾರಿಗೆ ತಂದಿದ್ದೇನೆ. ಅದರಿಂದ ಬಡ ಹೆಣ್ಣುಮಕ್ಕಳಿಗೆ ಅನುಕೂಲವಾಗಿದೆ ಎಂದರು.
ಹರಕಲುಸೀರೆ, ಮುರಕಲು ಬೈಸಿಕಲ್ ವಿತರಣೆ ಮಾಡಿದ್ದನ್ನು ಬಿಟ್ಟರೆ ಯಡಿಯೂರಪ್ಪ ಮತ್ತೇನನ್ನು ಮಾಡಲಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಮುಖ್ಯಮಂತ್ರಿಯಾಗಿ ಇತಿಮಿತಿಯಲ್ಲಿ ಗೌರವಯುತವಾಗಿ ಮಾತನಾಡಬೇಕು ಎಂದು ಎಚ್ಚರಿಕೆ ನೀಡಿದ ಯಡಿಯೂರಪ್ಪ ನಿಮ್ಮಂತೆ ಹಗಲು ದರೋಡೆ ಮಾಡುತ್ತಿಲ್ಲ ಎಂದು ಸಿದ್ದರಾಮಯ್ಯ ಅವರನ್ನು ಆರೋಪಿಸಿದರು.
ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ವ್ಯವಸ್ಥೆ ಜಾರಿಗೆ ತಂದೆ. ಕೃಷಿ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ಸೇರಿದಂತೆ ರೈತರಿಗಾಗಿ ಪ್ರತ್ಯೇಕ ಕೃಷಿ ಬಜೆಟ್‍ನ್ನು ಸಹ ಮಂಡನೆ ಮಾಡಲಾಗಿತ್ತು. ಇಷ್ಟಾದರೂ ನನ್ನನ್ನು ರೈತ ವಿರೋಧಿ ಎಂದು ಸಿದ್ದರಾಮಯ್ಯ ಆರೋಪಿಸುತ್ತಿದ್ದಾರೆ ಎಂದ ಅವರು, ಅನ್ನಭಾಗ್ಯ ಕೇಂದ್ರದ ಯೋಜನೆ ಯಾಗಿದೆ. ರಾಜ್ಯಸರ್ಕಾರ ಕೇವಲ ಅಕ್ಕಿಯನ್ನು ವಿತರಣೆ ಮಾಡುವ ಮೂಲಕ ಗೋಧಿಯನ್ನು ಕಳ್ಳ ಸಾಗಾಣೆ ಮಾಡಲಾಗುತ್ತಿದೆ. ಕೇಂದ್ರದ ಯೋಜನೆಯನ್ನು ರಾಜ್ಯಸರ್ಕಾರದ ಯೋಜನೆಯೆಂದು ಬಿಂಬಿಸುತ್ತಾ ಜನರ ಮೂಗಿಗೆ ತುಪ್ಪ ಸವರಲಾಗುತ್ತಿದೆ ಎಂದು ದೂರಿದರು.
ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಘಗಳಿಗೆ ಶೇ.1ರ ಬಡ್ಡಿ ದರದಲ್ಲಿ ಸಾಲ ವಿತರಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಚ್ಚೇ ದಿನ್ ಯಾವಾಗ ಬರುತ್ತದೆ ಎಂದು ಕೇಳುತ್ತಿದ್ದಾರೆ. ಈಗಾಗಲೇ ಗುಜರಾತ್‍ನಲ್ಲಿ ಕಾಂಗ್ರೆಸ್ ಮುಳುಗಿ ಹೋಗಿದೆ. ಹಿಮಾಚಲ ಪ್ರದೇಶದಲ್ಲಿ ಅಧಿಕಾರ ಕಳೆದು ಕೊಂಡಿದ್ದೀರಿ. ಇನ್ನುಳಿದಿರುವುದು ಇಲ್ಲಿ ಮಾತ್ರ. ಕರ್ನಾಟಕದಲ್ಲಿ ನಿಮ್ಮನ್ನು ಮನೆಗೆ ಕಳುಹಿಸಿದ ಮೇಲೆ ಅಚ್ಚೇದಿನ್ ಬರುತ್ತದೆ ಎಂದು ವ್ಯಂಗ್ಯವಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಸಿ.ಟಿ.ರವಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಡಿ.ಎನ್.ಜೀವರಾಜ್, ಆಯನೂರು ಮಂಜುನಾಥ್, ಬಸವರಾಜ್ ಬೊಮ್ಮಾಯಿ ಮಾತನಾಡಿದರು.
ವೇದಿಕೆಯಲ್ಲಿ ಜಿಪಂ ಅಧ್ಯಕ್ಷೆ ಚೈತ್ರಶ್ರೀ, ಶಾಸಕ ಎಂ.ಕೆ.ಪ್ರಾಣೇಶ್, ಮಾಜಿ ಶಾಸಕ ಎಂ.ಪಿ.ಕುಮಾರ ಸ್ವಾಮಿ, ರೇಣುಕಾಚಾರ್ಯ, ನಗರ ಸಭಾ ಅಧ್ಯಕ್ಷೆ ಶಿಲ್ಪಾ ರಾಜಶೇಖರ್, ಸದಸ್ಯ ರಾಜಶೇಖರ್, ಹೆಚ್.ಡಿ. ತಮ್ಮಯ್ಯ, ಎಪಿಎಂಸಿ ಅಧ್ಯಕ್ಷ ಕವೀಶ್, ಬಿಜೆಪಿ ಮುಖಂಡರುಗಳಾದ ಕೆ.ಆರ್.ಅನಿಲ್ ಕುಮಾರ್, ವರ ಸಿದ್ದಿ ವೇಣುಗೋಪಾಲ್, ಕೋಟೆ ರಂಗನಾಥ್, ಸಿ.ಹೆಚ್.ಲೋಕೇಶ್, ಬಿ.ರಾಜಪ್ಪ, ಕಲ್ಮುರುಡಪ್ಪ ಮತ್ತಿತರರು ಉಪಸ್ಥಿತರಿದ್ದರು.







