ಭೂ ಸಮಸ್ಯೆ ಪರಿಹಾರಕ್ಕೆ ಟವರ್ ಏರಿದ ಭೂಪ!

ಮಂಡ್ಯ, ಡಿ.30: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಕ್ಕೆ ಆಗ್ರಹಿಸಿ ವ್ಯಕ್ತಿಯೊಬ್ಬ ನಗರದಲ್ಲಿ ಎತ್ತರದ ಟವರ್ ಏರಿ ಆತಂಕ ಮೂಡಿಸಿದ ಪ್ರಕರಣ ಶನಿವಾರ ನಗರದಲ್ಲಿ ನಡೆಯಿತು.
ತಾಲೂಕಿನ ಉಪ್ಪರಕನ ಹಳ್ಳಿಯ ಕೃಷ್ಣ ಎಂಬುವವರು ನಗರದ ಸಂಜಯ ವೃತ್ತದಲ್ಲಿರುವ ಸಿಸಿ ಕ್ಯಾಮರಾ ಟವರ್ ಏರಿ, ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಸಮಸ್ಯೆ ಬಗೆಹರಿಸಬೇಕೆಂದು ಪಟ್ಟುಹಿಡಿದರು.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು, ಅಗ್ನಿಶಾಮಕದಳದವರು ಮತ್ತು ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯರು ಮನವಿ ಮಾಡಿದರೂ ವ್ಯಕ್ತಿ ಟವರ್ ಇಳಿಯದೆ ಮೊಂಡುತನ ಪ್ರದರ್ಶಿಸಿದ.
ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ನಾಗೇಶ್, ಜಮೀನಿಗೆ ಸಂಬಂಧಿಸಿದ ವಿಷಯವನ್ನು ಪರಿಶೀಲಿಸಿ ಶೀಘ್ರದಲ್ಲೇ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ ನಂತರ, ಟವರ್ ಇಳಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದರು.
ವ್ಯಕ್ತಿಯ ಸಮಸ್ಯೆ ಬಗ್ಗೆ ಪೂರ್ಣ ಮಾಹಿತಿ ಇಲ್ಲ. ಪೊಲೀಸರ ವಶದಲ್ಲಿರುವ ಅವರಿಂದ ಮಾಹಿತಿ ಪಡೆದು ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ನಾಗೇಶ್ ಸುದ್ದಿಗಾರರಿಗೆ ತಿಳಿಸಿದರು.





