192 ಪಾಕ್ ಯಾತ್ರಿಕರಿಗೆ ಭಾರತದಿಂದ ವೀಸಾ ನಿರಾಕರಣೆ: ಪಾಕ್ ಸರಕಾರ ಆರೋಪ
ಅಜ್ಮೀರ್ ಉರೂಸ್

ಇಸ್ಲಾಮಾಬಾದ್, ಡಿ.30: ಅಜ್ಮೀರ್‌ನ ಪ್ರಸಿದ್ಧ ಹಝ್ರತ್ ಖ್ವಾಜಾ ನಿಜಾಮುದ್ದೀನ್ ಚಿಶ್ತಿ ದರ್ಗಾದ ವಾರ್ಷಿಕ ಉರೂಸ್ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ಭಾರತಕ್ಕೆ ಭೇಟಿ ನೀಡಲು ಬಯಸಿದ್ದ 192 ಮಂದಿ ಪಾಕ್ ಯಾತ್ರಿಕರಿಗೆ ಹೊಸದಿಲ್ಲಿ ವೀಸಾಗಳನ್ನು ನಿರಾಕರಿಸಿದೆಯೆಂದು ಪಾಕಿಸ್ತಾನ ಶನಿವಾರ ಹೇಳಿದೆ.
ಜನವರಿ 1ರಿಂದ 8ರವರೆಗೆ ಹೊಸದಿಲ್ಲಿ ಸಮೀಪದ ಅಜ್ಮೀರ್‌ನಲ್ಲಿ ನಡೆಯಲಿರುವ ಉರೂಸ್‌ನಲ್ಲಿ ಪಾಲ್ಗೊಳ್ಳಲು ಬಯಸಿದ್ದ 192 ಮಂದಿ ಶ್ರದ್ಧಾಳುಗಳಿಗೆ ಪಾಕಿಸ್ತಾನವು ಕೊನೆಯ ಕ್ಷಣದಲ್ಲಿ ವೀಸಾ ನೀಡುವುದನ್ನು ಮುಂದೂಡಿದೆ ಇಲ್ಲವೇ ನಿರಾಕರಿಸಿ ರುವುದಕ್ಕಾಗಿ ಪಾಕಿಸ್ತಾನಕ್ಕೆ ಬೇಸರವಾಗಿದೆ’’ ಎಂದು ಪಾಕ್ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
‘‘ಭಾರತದ ಈ ನಿರ್ಧಾರದ ಪರಿಣಾಮವಾಗಿ, ಪಾಕಿಸ್ತಾನದ ಶ್ರದ್ಧಾಳುಗಳು ಈ ವಿಶೇಷ ಮಹತ್ವವಿರುವ ಉರೂಸ್‌ನಲ್ಲಿ ಪಾಲ್ಗೊಳ್ಳುವ ಅವಕಾಶದಿಂದ ವಂಚಿತರಾಗಿದ್ದಾರೆ ಎಂದು ಹೇಳಿಕೆ ತಿಳಿಸಿದೆ.
ಉಭಯದೇಶಗಳ ಧಾರ್ಮಿಕ ಕೇಂದ್ರಗಳು ಹಾಗೂ ಅವುಗಳ ವಾರ್ಷಿಕ ಉತ್ಸವಕ್ಕೆ ಭೇಟಿ ನೀಡುವ ಕುರಿತು 1974ರಲ್ಲಿ ಪಾಕಿಸ್ತಾನ-ಭಾರತ ಜಾರಿಗೆ ತಂದ ಶಿಷ್ಟಾಚಾರಗಳ ನಿಯಮಾವಳಿಗಳಡಿ ಈ ಭೇಟಿಯು ನಡೆಯುತ್ತಿದೆಯೆಂದು ಪಾಕ್ ಹೇಳಿಕೆಯಲ್ಲಿ ತಿಳಿಸಿದೆ.
ಪಾಕ್ ಯಾತ್ರಿಕರಿಗೆ ಅಜ್ಮೀರ್ ಉರೂಸ್‌ಗೆ ಭೇಟಿ ನಿರಾಕರಿಸಿರುವ ಭಾರತದ ಈ ಕ್ರಮವು ‘‘1974ರ ಶಿಷ್ಟಾಚಾರ ಒಡಂಬಡಿಕೆಗೆ ಹಾಗೂ ಉಭಯದೇಶಗಳ ಜನರ ನಡುವೆ ಒಡನಾಟವನ್ನೇರ್ಪಡಿಸುವ ಧ್ಯೇಯಕ್ಕೆ ಇದು ತದ್ವಿರುದ್ಧವಾಗಿದೆ’’ ಎಂದು ಹೇಳಿಕೆಯು ತಿಳಿಸಿದೆ.
ಸಮುದಾಯಗಳ ನಡುವೆ ಬಾಂಧವ್ಯದ ಸಂಕೇತವಾದ ಹಝ್ರತ್ ನಿಝಾಮುದ್ದೀನ್ ಔಲಿಯಾ ಅವರ ಉರೂಸ್ ಕಾರ್ಯಕ್ರಮಕ್ಕೆ ಸಂಬಂಧಿಸಿ ಭಾರತದ ಈ ನಡವಳಿಕೆ ವಿಷಾದನೀಯವೆಂದು ಪಾಕ್ ವಿದೇಶಾಂಗ ಸಚಿವಾಲಯವು ತಿಳಿಸಿದೆ.







