ಪ್ರತಿಭಟನೆಗಳಿಗೆ ಇರಾನ್ ಅಂಕುಶ: ರ‍್ಯಾಲಿಗಳಲ್ಲಿ ಭಾಗವಹಿಸದಂತೆ ಪೌರರಿಗೆ ಆದೇಶ

ಟೆಹರಾನ್,ಡಿ.30: ಇರಾನ್ ಆಡಳಿತ ಹಾಗೂ ದೇಶವು ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧ ಕಳೆದ ಎರಡು ದಿನಗಳಿಂದ ಪ್ರತಿಭಟನೆಗಳು ಭುಗಿಲೆದ್ದಿರುವ ಬೆನ್ನಲ್ಲೇ ಇರಾನ್‌ನ ಗೃಹ ಸಚಿವಾಲಯ ಹೇಳಿಕೆಯೊಂದನ್ನು ನೀಡಿ, ಕಾನೂನುಬಾಹಿರವಾಗಿ ನಡೆಯುವ ಯಾವುದೇ ಸಭೆಗಳಲ್ಲಿ ಭಾಗವಹಿಸಬಾರದೆಂದು ನಾಗರಿಕರಿಗೆ ಕಟ್ಟಪ್ಪಣೆ ಮಾಡಿದೆ.
ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಆಹ್ವಾನಿತರಾಗುವ ಯಾವುದೇ ನಾಗರಿಕರು ಇಂತಹ ಅಕ್ರಮ ಸಭೆಗಳಲ್ಲಿ ಭಾಗವಹಿಸಕೂಡದು.ಈ ಸಭೆಗಳು ತಮಗೆ ಮಾತ್ರವಲ್ಲ ಇತರ ಪೌರರಿಗೂ ಸಮಸ್ಯೆಯನ್ನು ಸೃಷ್ಟಿಸುತ್ತವೆ ಎಂದು ಅಬ್ದುಲ್ ರಹ್ಮಾನಿ ಫಾಝ್ಲಿ ತಿಳಿಸಿರುವುದಾಗಿ, ಅರೆಸರಕಾರಿ ಸುದ್ದಿಸಂಸ್ಥೆ ಇಸ್ನಾ ವರದಿ ಮಾಡಿದೆ.
ರ‍್ಯಾಲಿಯನ್ನು ಆಯೋಜಿಸುವವರು ಅನುಮತಿಗಾಗಿ ಮನವಿ ಪತ್ರವನ್ನು ಸಲ್ಲಿಸಬೇಕು ಹಾಗೂ ಆಂತರಿಕ ಸಚಿವಾಲಯ ಮತ್ತು ಪ್ರಾಂತೀಯ ಗವರ್ನರ್ ಅವರ ಕಚೇರಿಯು ಈ ಬಗ್ಗೆ ಪರಾಮರ್ಶೆ ನಡೆಸಲಿದೆಯೆಂದು ಅವರು ತಿಳಿಸಿದ್ದಾರೆ.
ಇರಾನ್‌ನ ಎರಡನೆ ಅತೀ ದೊಡ್ಡ ನಗರ ಮಶಾದ್‌ನಲ್ಲಿ ಗುರುವಾರ ಭುಗಿಲೆದ್ದ ಆಡಳಿತ ವಿರೋಧಿ ಪ್ರತಿಭಟನೆಯು ಆನಂತರ ಇತರ ನಗರಗಳಿಗೂ ಹರಡಿತ್ತು.
ಆರಂಭದಲ್ಲಿ ದೇಶದ ಆರ್ಥಿಕ ಬಿಕ್ಕಟ್ಟಿನ ಕುರಿತು ಗಮನಸೆಳೆಯಲು ಆರಂಭಗೊಂಡಿದ್ದ ಪ್ರತಿಭಟನೆಯು ಆಡಳಿತ ವಿರೋಧಿ ಚಳವಳಿಯಾಗಿ ಮಾರ್ಪಟ್ಟಿದೆ. ರಾಜಕೀಯ ಕೈದಿಗಳನ್ನು ಬಿಡುಗಡೆಗೊಳಿಸುವಂತೆಯೂ ಪ್ರತಿಭಟನಾಕಾರರು ಇರಾನ್ ಆಡಳಿತವನ್ನು ಆಗ್ರಹಿಸುತ್ತಿದ್ದಾರೆ.







