ಅಮೆರಿಕದ ಬ್ಲಾಕ್‌ಮೇಲ್ ನಿಲ್ಲುವ ತನಕ ಅಣ್ವಸ್ತ್ರ ತ್ಯಜಿಸಲಾರೆ: ಉ.ಕೊರಿಯ ಶಪಥ

ಸೋಲ್,ಡಿ.30: ಅಮೆರಿಕವು ಬ್ಲಾಕ್‌ಮೇಲ್ ನಡೆಸುವುದನ್ನು ಹಾಗೂ ಅದು ತನ್ನ ‘ಮನೆಬಾಗಿಲಲ್ಲಿ’ ಯುದ್ಧಕವಾಯತುಗಳನ್ನು ನಡೆಸುವುದನ್ನು ನಿಲ್ಲಿಸುವವರೆಗೂ ತಾನು ಅಣ್ವಸ್ತ್ರಗಳನ್ನು ತ್ಯಜಿಸುವುದಿಲ್ಲವೆಂದು ಉತ್ತರ ಕೊರಿಯ ಶನಿವಾರ ಘೋಷಿಸಿದೆ.
ಅಮೆರಿಕ ಹಾಗೂ ಅದರ ‘ಜೀತದಾಳು’ ಶಕ್ತಿಗಳು ಅಣ್ವಸ್ತ್ರ ದಾಳಿಯ ಬೆದರಿಕೆಯೊಡ್ಡುತ್ತಿರುವುದು, ಬ್ಲಾಕ್‌ಮೇಲ್ ಹಾಗೂ ಯುದ್ಧಕವಾಯತುಗಳನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಕೊರಿಯವು ಆತ್ಮರಕ್ಷಣೆಯ ಹಾಗೂ ಅಣುಶಕ್ತಿ ದಾಳಿಗಳನ್ನು ನಡೆಸುವ ತನ್ನ ಸಾಮರ್ಥ್ಯವನ್ನು ವೃದ್ಧಿಸಿದೆ ಎಂದು ಉತ್ತರ ಕೊರಿಯದ ಅಧಿಕೃತ ಸುದ್ದಿಸಂಸ್ಥೆ ಕೆಸಿಎನ್‌ಎ ಶನಿವಾರ ಪ್ರಕಟಿಸಿದ ವರದಿಯೊಂದರಲ್ಲಿ ತಿಳಿಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಉತ್ತರ ಕೊರಿಯದ ವಿರುದ್ಧ ಹಿಂದೆಂದೂ ಇಲ್ಲದಂತಹ ದ್ವೇಷದ ನೀತಿಗಳನ್ನು ಜಾರಿಗೊಳಿಸುತ್ತಿದ್ದಾರೆ ಹಾಗೂ ಪೂರ್ವಯೋಜಿತ ದಾಳಿಗಳ ಬಗ್ಗೆ ಮಾತನಾಡುತ್ತಿದ್ದಾರೆಂದು ಕೆಸಿಎನ್‌ಎ ಆರೋಪಿಸಿದೆ. ಉತ್ತರ ಕೊರಿಯವು ಒಂದು ತಿರಸ್ಕರಿಸಲಾಗದಂತಹ ನೂತನ ಆಯಕಟ್ಟಿನ ರಾಷ್ಟ್ರವಾಗಿದೆ ಹಾಗೂ ಅಣ್ವಸ್ತ್ರ ಶಕ್ತಿಶಾಲಿ ದೇಶವಾಗಿದೆಯೆಂದು ಅದು ಹೇಳಿದೆ.





