ಬೆದರಿಕೆ ಆರೋಪ: ಪೋಷಕ ನಟನ ಬಂಧನ

ಬೆಂಗಳೂರು, ಡಿ.30: ಚಿತ್ರನಟಿಗೆ ನಿರ್ದೇಶಕರ ಜೊತೆ ಅಕ್ರಮ ಸಂಬಂಧವಿದೆ ಎಂದು ಬೆದರಿಕೆ ಹಾಕಿದ ಆರೋಪದ ಮೇಲೆ ಇಲ್ಲಿನ ಮಾಗಡಿ ರಸ್ತೆ ಠಾಣಾ ಪೊಲೀಸರು, ಪೋಷಕ ನಟನನ್ನು ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ರಾಜಶೇಖರ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದು, ಈ ಸಂಬಂಧ ರಾಜಾಜಿನಗರದ ಕೀರ್ತಿ ಭಟ್ ಎಂಬಾಕೆ (23) ದೂರು ನೀಡಿದ್ದರು ಎನ್ನಲಾಗಿದೆ.
ಚಿತ್ರದಲ್ಲಿ ನಾಯಕಿಯ ತಂದೆ ಪಾತ್ರ ಮಾಡಿದ ಆರೋಪಿ ರಾಜಶೇಖರ್ ಅವರು ಡಿ.25ರಂದು ಚಿತ್ರ ನಿರ್ದೇಶಕ ಕಿಶೋರ್ ಸಿ.ನಾಯಕ್ ಅವರಿಗೆ ಕರೆ ಮಾಡಿ ನಾಯಕಿ ಜೊತೆ ನಿಮಗೆ ಅಕ್ರಮ ಸಂಬಂಧವಿದೆ. ಶೂಟಿಂಗ್ ಸಮಯದಲ್ಲಿ ಇಬ್ಬರೂ ಜೊತೆಯಾಗಿ ಓಡಾಡುತ್ತಿದ್ದಿರಿ. ನಿಮ್ಮ ವರ್ಜಿನ್ ಪರಿಶೀಲನೆ ನಡೆಸಿದರೆ ಎಲ್ಲ ಬೆಳಕಿಗೆ ಬರುತ್ತದೆ ಎಂದು ಬೆದರಿಸಿದ್ದರು ಎಂದು ತಿಳಿದುಬಂದಿದೆ.
ನಾಯಕಿ ಆರೋಪಿ ರಾಜಶೇಖರ್‌ಗೆ ಕರೆ ಮಾಡಿದಾಗ ಆರೋಪಿಯು ನಾಯಕಿಗೆ ಅವ್ಯಾಚ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಹಾಕಿರುವುದಾಗಿ ನಾಯಕಿ ಕೀರ್ತಿ ಭಟ್ ಮಾಗಡಿ ರಸ್ತೆ ಪೊಲೀಸ್ ಠಾಣೆಗೆ ಡಿ.26ರಂದು ದೂರು ನೀಡಿದ್ದರು ಎನ್ನಲಾಗಿದೆ.
ಈ ಸಂಬಂಧ ರಾಜಶೇಖರ್ ವಿರುದ್ಧ ಲೈಂಗಿಕ ಕಿರುಕುಳ, ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪ ಮತ್ತು ಪ್ರಾಣ ಬೆದರಿಕೆಯೊಡ್ಡಿದ ಆರೋಪದಡಿ ಐಪಿಸಿ ಸೆಕ್ಷನ್ 354 ಈ, 504, 506, 509 ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ರಾಜಶೇಖರ್ ಅವರನ್ನು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.







