ಮೇಘಾಲಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಮಾಜಿ ಸಿಎಂ ಲಪಾಂಗ್ ವಜಾ

ಹೊಸದಿಲ್ಲಿ, ಡಿ. 30: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಡಿ.ಡಿ. ಲಪಾಂಗ್ ಅವರನ್ನು ವಜಾಗೊಳಿಸಿದ್ದಾರೆ ಹಾಗೂ ಅವರ ಸ್ಥಾನಕ್ಕೆ ಸೆಲೆಸ್ಟೈನ್ ಲಿಂಗ್ಡೋ ಅವರನ್ನು ನೇಮಿಸಿದ್ದಾರೆ.
ಎನ್‌ಡಿಎಯ ಮಿತ್ರ ಪಕ್ಷವಾದ ನ್ಯಾಶನಲ್ ಪೀಪಲ್ ಅಸೆಂಬ್ಲಿ (ಎನ್‌ಪಿಪಿ) ಟಿಕೆಟ್‌ನಿಂದ ಮುಂಬರುವ ಮೇಘಾಲಯ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ನ ಐವರು ಶಾಸಕರು ರಾಜೀನಾಮೆ ನೀಡಿದ ದಿನದ ಬಳಿಕ ಈ ಬೆಳವಣಿಗೆ ನಡೆದಿದೆ.
ಲಿಂಗ್ಡೊ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಸಂಪುಟದ ಸಚಿವ. ಶಿಲ್ಲಾಂಗ್‌ನ ಲೋಕಸಭಾ ಸಂಸದ ವಿನ್ಸೆಂಟ್ ಎಚ್. ಪಾಲಾ ಅವರನ್ನು ಪಿಸಿಸಿ ಕಾರ್ಯಕಾರಿ ಸಮಿತಿಯ ಅಧ್ಯಕ್ಷರನ್ನಾಗಿ ನಿಯೋಜಿಸಲಾಗಿದೆ.
ಆದಾಗ್ಯೂ ಲಪಾಂಗ್ ಅವರ ಅಸಮಾಧಾನ ತಣಿಸಲು ಅವರನ್ನು ಪಿಸಿಸಿಯ ಸಲಹೆಗಾರರಾಗಿ ರಾಹುಲ್ ಗಾಂಧಿ ನೇಮಕ ಮಾಡಿದ್ದಾರೆ.
Next Story





