ಜೆರುಸಲೇಂಗೆ ಇಸ್ರೇಲ್ ರಾಜಧಾನಿ ಮಾನ್ಯತೆ : ಗಾಝಾದಲ್ಲಿ ಭಾರಿ ಪ್ರತಿಭಟನೆ
ಹಲವರಿಗೆ ಗಾಯ
ಗಾಝಾ,ಡಿ.30: ಜೆರುಸಲೇಂಗೆ ಇಸ್ರೇಲ್ ರಾಜಧಾನಿಯ ಮಾನ್ಯತೆ ನೀಡುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರದ ವಿರುದ್ಧ ಗಾಝಾ ಹಾಗೂ ಪಶ್ಚಿಮದಂಡೆಯಲ್ಲಿ ಭುಗಿಲೆದ್ದ ಬೃಹತ್ ಪ್ರತಿಭಟನೆಯ ವೇಳೆ ಇಸ್ರೇಲಿ ಪಡೆಗಳೊಂದಿಗೆ ನಡೆದ ಘರ್ಷಣೆಯಲ್ಲಿ ಹಲವಾರು ಫೆಲೆಸ್ತೀನಿಯರು ಗಾಯಗೊಂಡಿದ್ದಾರೆ.
ಗಾಝಾದಲ್ಲಿ ಸುಮಾರು 50 ಮಂದಿ ಪ್ರತಿಭಟನಾಕಾರರ ಮೇಲೆ ಪೊಲೀಸರು ಗುಂಡು ಹಾರಿಸಿ ಗಾಯಗೊಳಿಸಿದ್ದಾರೆ. ಅವರಲ್ಲಿ ಐವರ ಪರಿಸ್ಥಿತಿ ಚಿಂತಾಜನಕವಾಗಿದೆಯೆಂದು ಫೆಲೆಸ್ತೀನ್ ಆರೋಗ್ಯ ಸಚಿವಾಲಯದ ವಕ್ತಾರ ಅಶ್ರಫ್ ಅಲ್ ಖ್ವೆದ್ರಾ ತಿಳಿಸಿರುವುದಾಗಿ ಎಫೆ ಸುದ್ದಿಸಂಸ್ಥೆ ವರದಿ ಮಾಡಿದೆ.
ಇಸ್ರೇಲಿ ಸೈನಿಕರ ಅಶ್ರುವಾಯು ಶೆಲ್ ದಾಳಿಯಿಂದಾಗಿ 120 ಮಂದಿ ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆಯೆಂದು ಫೆಲೆಸ್ತೀನ್ ಸರಕಾರದ ವಕ್ತಾರರು ತಿಳಿಸಿದ್ದಾರೆ.
ಜೆರುಸಲೇಂಗೆ ಇಸ್ರೇಲ್ ರಾಜಧಾನಿಯ ಮಾನ್ಯತೆ ನೀಡುವ ಟ್ರಂಪ್ ನಿರ್ಧಾರವನ್ನು ಖಂಡಿಸಿ ಶುಕ್ರವಾರದ ಪ್ರಾರ್ಥನೆಯ ಬಳಿಕ ಸಾವಿರಾರು ಫೆಲೆಸ್ತೀನಿಯರು ನಬ್ಲಸ್, ಹೆಬ್ರೊನ್, ಬಿಲಿನ್, ಕುಫ್ರ್ ಖ್ವದ್ದುಮಂ, ಬೆಥ್ಲೆಹೆಮ್ ಹಾಗೂ ಅಲ್ ಬಿರೆಹ್‌ಗಳಲ್ಲಿ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ್ದರು.







