ಕತರ್ ಓಪನ್: ಜೊಕೊವಿಕ್ ಅಲಭ್ಯ
_(29749594822).jpg)
ದೋಹಾ, ಡಿ.30: ವಿಶ್ವದ ಮಾಜಿ ನಂ.1 ಆಟಗಾರ ನೊವಾಕ್ ಜೊಕೊವಿಕ್ ಮುಂದಿನ ವಾರ ಆರಂಭವಾಗಲಿರುವ ಕತರ್ ಓಪನ್ ಟೆನಿಸ್ ಟೂರ್ನಮೆಂಟ್‌ನಿಂದ ಹೊರಗುಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಜನವರಿಯಲ್ಲಿ ಆರಂಭವಾಗಲಿರುವ ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್‌ನಲ್ಲಿ ಭಾಗವಹಿಸುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಇತ್ತೀಚೆಗಷ್ಟೇ ಅಬುಧಾಬಿ ಪ್ರದರ್ಶನ ಪಂದ್ಯದಿಂದ ಹೊರಗುಳಿದಿದ್ದ ಜೊಕೊವಿಕ್ ಇನ್ನೂ ಮೊಣಕೈ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿಲ್ಲ. 12 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಜೊಕೊವಿಕ್ ಕಳೆದ ವರ್ಷ ಆ್ಯಂಡಿ ಮರ್ರೆಯವರನ್ನು ಮಣಿಸಿ ಕತರ್ ಓಪನ್ ಪ್ರಶಸ್ತಿಯನ್ನು ಜಯಿಸಿದ್ದರು.
ಕತರ್ ಓಪನ್‌ನಿಂದಲೂ ದೂರ ಉಳಿದಿರುವ 30ರ ಹರೆಯದ ಜೊಕೊವಿಕ್ ಜ.15 ರಿಂದ ಆರಂಭವಾಗಲಿರುವ ವರ್ಷದ ಮೊದಲ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಆಡುವ ಬಗ್ಗೆ ನಿರ್ಧಾರವಾಗಿಲ್ಲ. ಇತ್ತೀಚಿನ ವರ್ಷಗಳಲ್ಲಿ ಕತರ್ ಟೂರ್ನಿಯನ್ನು ಆಸ್ಟ್ರೇಲಿಯನ್ ಓಪನ್‌ಗೆ ತಾಲೀಮು ಟೂರ್ನಿಯಾಗಿ ಬಳಸಿಕೊಳ್ಳುತ್ತಿದ್ದ ಜೊಕೊವಿಕ್ 2016ರಲ್ಲಿ ಕತರ್ ಓಪನ್ ಫೈನಲ್‌ನಲ್ಲಿ ರಫೆಲ್ ನಡಾಲ್‌ರನ್ನು ಸೋಲಿಸಿದ್ದರು. ಈ ವರ್ಷ ಆರನೇ ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದರು.





