ಈ ವರ್ಷ ಗರಿಷ್ಠ ಟೆಸ್ಟ್ ಸ್ಕೋರರ್ ಸ್ಟೀವ್ ಸ್ಮಿತ್
ಸತತ 4ನೇ ವರ್ಷ ಸಾವಿರಕ್ಕೂ ಅಧಿಕ ರನ್

ಮೆಲ್ಬೋರ್ನ್, ಡಿ.30: ಆಸ್ಟ್ರೇಲಿಯ ನಾಯಕ ಸ್ಟೀವನ್ ಸ್ಮಿತ್ ಇಂಗ್ಲೆಂಡ್ ವಿರುದ್ಧ 23ನೇ ಶತಕ ಸಿಡಿಸುವ ಮೂಲಕ ಈ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಗಳಿಸಿ ಹೊಸ ದಾಖಲೆ ನಿರ್ಮಿಸಿದರು.
ಎಂಸಿಜಿಯಲ್ಲಿ ಸತತ 4ನೇ ಶತಕ ಸಿಡಿಸಿದ ಸ್ಮಿತ್ ಕ್ರಿಕೆಟ್ ದಂತಕತೆ ಡಾನ್ ಬ್ರಾಡ್ಮನ್ ದಾಖಲೆ ಸರಿಟ್ಟಿದರು. ಸ್ಮಿತ್ ಈ ವರ್ಷ 1,305 ರನ್ ಗಳಿಸುವುದರೊಂದಿಗೆ ಸತತ ನಾಲ್ಕನೇ ಬಾರಿ ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ಟೆಸ್ಟ್ ಸ್ಕೋರ್ ಕಲೆ ಹಾಕಿದ ಸಾಧನೆ ಮಾಡಿದರು. ಮ್ಯಾಥ್ಯೂ ಹೇಡನ್ ಬಳಿಕ ಈ ಸಾಧನೆ ಮಾಡಿದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಸ್ಮಿತ್ ಕ್ರಿಕೆಟ್ ಇತಿಹಾಸದಲ್ಲಿ 70ಕ್ಕೂ ಅಧಿಕ ಸರಾಸರಿಯಲ್ಲಿ 4 ಬಾರಿ ಸಾವಿರಕ್ಕೂ ಅಧಿಕ ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಆಗಿದ್ದಾರೆ.
ಸ್ಮಿತ್ 2014ರಲ್ಲಿ 81.85ರ ಸರಾಸರಿಯಲ್ಲಿ 1,146 ರನ್, 2015ರಲ್ಲಿ 73.70ರ ಸರಾಸರಿಯಲ್ಲಿ 1,474, 2016ರಲ್ಲಿ 71.93ರ ಸರಾಸರಿಯಲ್ಲಿ 1,079 ರನ್ ಗಳಿಸಿದ್ದಾರೆ.
ಕ್ಯಾಲೆಂಡರ್ ವರ್ಷದಲ್ಲಿ ಆರು ಶತಕಗಳನ್ನು ಸಿಡಿಸಿದ ಸ್ಮಿತ್ ಮಾಜಿ ನಾಯಕ ರಿಕಿ ಪಾಂಟಿಂಗ್ ಸಾಧನೆಯನ್ನು ಸರಿಗಟ್ಟಿದರು. ವೇಗವಾಗಿ 23 ಶತಕ ಸಿಡಿಸಿದ ಮೂರನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಸ್ಮಿತ್ 110ನೇ ಇನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದರು. ಬ್ರಾಡ್ಮನ್(59), ಸುನೀಲ್ ಗವಾಸ್ಕರ್(109)ಹಾಗೂ ಮುಹಮ್ಮದ್ ಯೂಸುಫ್(122)ವೇಗವಾಗಿ 23 ಶತಕ ಸಿಡಿಸಿದ್ದಾರೆ







