ಸಣ್ಣ ಪ್ರಾಯದಲ್ಲೇ ಕ್ರೀಡೆಗೆ ಪ್ರೋತ್ಸಾಹ ಅಗತ್ಯ: ಮೇಯರ್ ಕವಿತಾ ಸನಿಲ್

ಮಂಗಳೂರು, ಡಿ.31: ಮಕ್ಕಳು ಚಿಕ್ಕವರಾಗಿದ್ದಾಗಲೇ ಯಾವುದಾದರೊಂದು ಕ್ರೀಡೆಯಲ್ಲಿ ಪಳಗುವಂತೆ ಮಾಡಿದರೆ ಆ ಮಕ್ಕಳು ಮುಂದೆ ದೇಶಕ್ಕೆ ಹೆಸರು ತಂದು ಕೊಡುವ ಕ್ರೀಡಾಪಟುಗಳಾಗುತ್ತಾರೆ. ಮಕ್ಕಳನ್ನು ಕ್ರೀಡಾಪಟುಗಳನ್ನಾಗಿಸುವುದರಲ್ಲಿ ಹೆತ್ತವರ ಪಾತ್ರ ಮಹತ್ತರವಾದದ್ದು ಎಂದು ಮೇಯರ್ ಕವಿತಾ ಸನಿಲ್ ಅಭಿಪ್ರಾಯಪಟ್ಟರು.
ನಗರದ ಮಂಗಳಾ ಸ್ಟೇಡಿಯಂ ಬಳಿ ಇರುವ ಸ್ಕೇಟಿಂಗ್ ರಿಂಕ್‌ನಲ್ಲಿ ದ.ಕ. ಜಿಲ್ಲಾ ಸ್ಕೇಟಿಂಗ್ ಅಸೋಸಿಯೇಶನ್ ಆಯೋಜಿಸಿದ್ದ ಜಿಲ್ಲಾ ಮಟ್ಟದ ಓಪನ್ ಸ್ಕೇಟಿಂಗ್ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ನಾನೂ ಸ್ವತಃ ಸಣ್ಣ ಪ್ರಾಯದಲ್ಲೇ ವಿವಿಧ ಕ್ರೀಡೆಗಳಲ್ಲಿ ಭಾಗಿಯಾಗಿದ್ದೆ. ಮುಂದೆ ನನ್ನ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಇದು ಸಾಧ್ಯವಾಯಿತು. ನನ್ನ ಹೆತ್ತವರೂ ನನ್ನ ಸಾಧನೆಯ ಹಿಂದೆ ಶ್ರಮಿಸಿದ್ದಾರೆ. ಎಲ್ಲ ಮಕ್ಕಳ ಹೆತ್ತವರೂ ಮಕ್ಕಳ ಕ್ರೀಡಾ ಕ್ಷೇತ್ರದಲ್ಲಿ ಶ್ರಮಪಟ್ಟರೆ ಮುಂದೆ ಅವರು ದೊಡ್ಡ ಕ್ರೀಡಾಪಟುಗಳಾಗಿ ಹೊರಹೊಮ್ಮಲಿದ್ದಾರೆ ಎಂದು ಕವಿತಾ ಸನಿಲ್ ನುಡಿದರು.
ಜಿಲ್ಲಾ ಮಟ್ಟದ ಈ ಸ್ಕೇಟಿಂಗ್ ಸ್ಪರ್ಧೆಯು ಹುಡುಗರ ಹಾಗೂ ಹುಡುಗಿಯರ ವಿಭಾಗದಲ್ಲಿ ನಡೆದಿದ್ದು, ಪ್ರತೀ ವಿಭಾಗದಲ್ಲಿ ವಿಜಯಿಗಳಾದ ಸ್ಕೇಟರ್‌ಗಳಿಗೆ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ನೀಡಲಾಗಿದ್ದು, ವೈಯಕ್ತಿಕ ಚಾಂಪಿಯನ್‌ಗಳಿಗೆ ಟ್ರೋಫಿ ನೀಡಿ ಗೌರವಿಸಲಾಯಿತು.
ಮಂಗಳೂರು ರೋಲರ್ ಸ್ಕೇಟಿಂಗ್ ಕ್ಲಬ್‌ನ ತರಬೇತುದಾರ ಮಹೇಶ್ ಕುಮಾರ್‌ರ ಮಾರ್ಗದರ್ಶನದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಲೆಸ್ಟರ್ ಡಿಸೋಜ ಚೀಫ್ ರೆಫ್ರಿಯಾಗಿ ಕಾರ್ಯನಿರ್ವಹಿಸಿದರು.
ಈ ಸಂದರ್ಭ ದ.ಕ. ಜಿಲ್ಲಾ ಸ್ಕೇಟಿಂಗ್ ಅಸೋಸಿಯೇಶನ್‌ನ ಅಧ್ಯಕ್ಷ ಅಲ್ವಿನ್ ಡಿಸಿಲ್ವ,ಸದಸ್ಯರಾದ ಡಾ.ಸೂರ್ಯ ಅಡ್ಡೂರು, ಉಮೇಶ್ ಗಟ್ಟಿ, ಸುಖ್‌ಪಾಲ್ ಪೊಳಲಿ, ಬಾಲಕೃಷ್ಣ ಆಳ್ವ ಉಪಸ್ಥಿತರಿದ್ದರು. ಶ್ರೀಲತಾ ಯು.ಎ ಕಾರ್ಯಕ್ರಮ ನಿರೂಪಿಸಿದರು.







