ಕಲೆ ಯಾವುದೇ ವರ್ಗಕ್ಕೆ ಸೀಮಿತವಾದ ಸೊತ್ತಲ್ಲ- ಧರ್ಮಪಾಲನಾಥ ಸ್ವಾಮೀಜಿ
ವೀರಮಂಗಲ ಶಾರದಾ ಕಲಾ ಶಾಲೆಯ 15ನೆ ವರ್ಷಾಚರಣೆ

ಪುತ್ತೂರು, ಡಿ. 31: ಸಂಗೀತ, ಭರತ ನಾಟ್ಯ ಸೇರಿದಂತೆ ಯಾವುದೇ ಕಲೆ ಒಂದು ವರ್ಗಕ್ಕೆ ಸೀಮಿತವಾದ ಸೊತ್ತಲ್ಲ. ಈ ಕಲೆಗಳು ಪ್ರಾಚೀನವಾದ ಜ್ಞಾನ ನೀತಿಗಳು. ಕಲೆಯಲ್ಲಿ ಆಸಕ್ತಿ ಇರುವ ಎಲ್ಲರಿಗೂ ಕಲಾ ಮಾತೆ ಸರಸ್ವತಿ ಒಳಿಯುತ್ತಾಳೆ ಎಂದು ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿ ಅವರು ಹೇಳಿದರು.
ಪುತ್ತೂರು ತಾಲ್ಲೂಕಿನ ವೀರಮಂಗಲದ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಭಾನುವಾರ ನಡೆದ ವೀರಮಂಗಲದ ಶಾರದಾ ಕಲಾ ಶಾಲೆಯ 15ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಅವರು ವಿದ್ವಾನ್ ಗೋಪಾಲಕೃಷ್ಣ ವೀರಮಂಗಲ ಅವರು ವಿರಚಿತ ನೃತ್ಯ ಗೀತೆಗಳ ’ಕೃಷ್ಣಾಂಕಿತ ನೃತ್ಯಗೀತಾ’ ಪುಸ್ತಕವನ್ನು ಅನಾವರಣ ಮಾಡಿ ಮಾತನಾಡಿದರು.
ಆಧುನಿಕ ಸಾಹಿತ್ಯ, ಆಧುನಿಕ ವಿಚಾರಧಾರೆಗಳು ಎಷ್ಟೇ ಬೆಳೆಯುತ್ತಿದ್ದರೂ ಪ್ರಾಚೀನವಾಗಿ ಬಂದಂತಹ ಸಂಗೀತ, ಭರತ ನಾಟ್ಯ ಕಲೆಗೆ ತನ್ನದೇ ಆದ ವೈವಿಧ್ಯ, ಸ್ಥಾನಮಾನವಿದೆ. ವೇದಕಾಲದಲ್ಲಿ ಈ ಕಲೆಗೆ ಯಾವ ಸ್ಥಾನಮಾನ ಇತ್ತೋ ಇಂದಿಗೂ ಅದು ಜನಮಾನಸದಲ್ಲಿ ಸ್ಥಿರವಾಗಿ ನಿಂತಿದೆ ಎಂದು ಅವರು ತಿಳಿಸಿದರು.
ಶಾರದಾ ಕಲಾಶಾಲೆಯ ನೃತ್ಯ ಗುರು ಗೋಪಾಲಕೃಷ್ಣ ಅವರು ತನ್ನ ನೃತ್ಯ ಗುರು, ಪುತ್ತೂರು ಶಾರದಾ ಕಲಾ ಕೇಂದ್ರ ಟ್ರಸ್ಟ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸುದರ್ಶನ್ ಎಂ.ಎಲ್.ಭಟ್ ಅವರಿಗೆ ಗುರುವಂದನೆ ಸಲ್ಲಿಸಿದರು.
ವೀರಮಂಗಲ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಿವರಾಮ ಭಟ್ ಬಾವ ಅವರು ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಹಾಸ ರೈ, ಪುರುಷರಕಟ್ಟೆ ಸರಸ್ವತಿ ವಿದ್ಯಾಮಂದಿರದ ಸಂಚಾಲಕ ಅವಿನಾಶ್ ಕೊಡಂಕಿರಿ, ವಿದುಷಿ ನಯನ ವಿ. ರೈ, ಸಮಾಜಿಕ ಕಾರ್ಯಕರ್ತೆ ನಳಿನಿ ಲೋಕಪ್ಪ ಗೌಡ ಕರೆಮನೆ ಅತಿಥಿಗಳಾಗಿದ್ದರು.
ಗೋಪಾಲಕೃಷ್ಣ ವೀರಮಂಗಲ ಸ್ವಾಗತಿಸಿದರು. ಯಮುನಾ ರಘುಚಂದ್ರ ವಂದಿಸಿದರು. ವಸಂತ ವೀರಮಂಗಲ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶಾರದಾ ಕಲಾ ಶಾಲೆಯ ವಿವಿಧ ಶಾಖೆಗಳ ವಿದ್ಯಾರ್ಥಿಗಳಿಂದ ನೃತ್ಯ ಮತ್ತು ನೃತ್ಯ ರೂಪಕದ ಪ್ರದರ್ಶನ ನಡೆಯಿತು.







