ಭರತನಾಟ್ಯ ಸಂಸ್ಕೃತಿ , ಸಂಸ್ಕಾರದ ಪ್ರತೀಕ: ಕುಮಾರಸ್ವಾಮಿ
.jpg)
ಸಾಗರ, ಡಿ.31: ಭರತನಾಟ್ಯ ಸಂಸ್ಕೃತಿ ಹಾಗೂ ಸಂಸ್ಕಾರದ ಪ್ರತೀಕವಾಗಿದೆ ಎಂದು ನಗರಸಭೆ ಉಪಾಧ್ಯಕ್ಷೆ ಎಸ್.ಜೆ. ಕುಮಾರಸ್ವಾಮಿ ಅಭಿಪ್ರಾಯಿಸಿದ್ದಾರೆ. ಇಲ್ಲಿನ ಶ್ರೀನಗರದ ನೃತ್ಯಭಾಸ್ಕರ ಸಭಾಂಗಣದಲ್ಲಿ ಶನಿವಾರ ನಾಟ್ಯತರಂಗ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಸಂಸ್ಕೃತಿ ಸಪ್ತಾಹ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಾಗರದಂತಹ ನಗರಗಳಲ್ಲಿ ರಾಷ್ಟ್ರೀಯ ಸಂಸ್ಕೃತಿ ಸಪ್ತಾಹದಂತಹ ಕಾರ್ಯಕ್ರಮ ಸಂಘಟಿಸುವುದು ಸವಾಲಿನ ಕೆಲಸ. ಅನೇಕ ವರ್ಷಗಳಿಂದ ಇಂತಹ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಿಕೊಂಡು ಬರಲಾಗುತ್ತಿದೆ. ಇಂತಹ ಸಂಸ್ಥೆಗಳಿಗೆ ಸಾರ್ವಜನಿಕರ ಸಹಕಾರ ಅಗತ್ಯ. ನಗರಸಭೆ ಕೇವಲ ರಸ್ತೆ, ಚರಂಡಿ, ಕಟ್ಟಡ ನಿರ್ಮಾಣಕ್ಕೆ ಮಾತ್ರ ಸೀಮಿತವಾಗದೆ ನಗರವ್ಯಾಪ್ತಿಯಲ್ಲಿ ನಡೆಯುವ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉತ್ತೇಜಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ನಾಟ್ಯತರಂಗ ಟ್ರಸ್ಟ್‌ನ ಪ್ರಾಚಾರ್ಯ ವಿದ್ವಾನ್ ಜಿ.ಬಿ.ಜನಾರ್ದನ್ ಮಾತನಾಡಿ, ಅಂತರಾಷ್ಟ್ರೀಯ ನೃತ್ಯ ಕಲಾವಿದೆ ಪದ್ಮಾ ಸುಬ್ರಹ್ಮಣ್ಯಂ ಅವರ ಭರತನಾಟ್ಯ ಪ್ರದರ್ಶನವನ್ನು ಜ.7ರಂದು ಸಂಜೆ 5-30ಕ್ಕೆ ದೇವರಾಜ ಅರಸು ಕಲಾಭವನದಲ್ಲಿ ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಯಕ್ಷಗಾನದ ಹಿರಿಯ ಅರ್ಥಧಾರಿ ಡಾ.ಶಾಂತಾರಾಮ ಪ್ರಭು ಅವರನ್ನು ಸನ್ಮಾನಿಸಲಾಯಿತು. ನಾಟ್ಯತರಂಗ ಸಂಸ್ಥೆ ಅಧ್ಯಕ್ಷ ಅಂದಗಾರು ಜನಾರ್ದನ್ ಅಧ್ಯಕ್ಷತೆ ವಹಿಸಿದ್ದರು. ಅರ್ಚನ ಹೆಗಡೆ ಪ್ರಾರ್ಥಿಸಿದರು. ಕಾವ್ಯ ಸ್ವಾಗತಿಸಿದರು. ಪ್ರತಿಮಾ ಭಟ್ ಪ್ರಶಸ್ತಿಪತ್ರ ವಾಚಿಸಿದರು. ವರದಾ ಜನಾರ್ದನ್ ವಂದಿಸಿದರು. ಸುಮನಾ ಮತ್ತು ರಾಜಲಕ್ಷ್ಮೀ ನಿರೂಪಿಸಿದರು. ನಂತರ ಗೀತಾ ಶಿಶಿರ, ಜನನಿ ಮುರಳಿ ಬೆಂಗಳೂರು ಅವರಿಂದ ಯುಗಳ ಭರತನಾಟ್ಯ ಪ್ರದರ್ಶನ ನಡೆಯಿತು.







