ಇರಾನ್‌ನಲ್ಲಿ ಮುಂದುವರಿದ ಆಡಳಿತ ವಿರೋಧಿ ಪ್ರತಿಭಟನೆ: ಪ್ರತಿಭಟನಾ ರ‍್ಯಾಲಿಯಲ್ಲಿ ಇಬ್ಬರ ಸಾವು
ಸರಕಾರದಿಂದ ಸಾಮಾಜಿಕ ಜಾಲತಾಣಗಳಿಗೆ ನಿರ್ಬಂಧ

ಟೆಹರಾನ್,ಡಿ.31: ದೇಶದ ವಿವಿಧ ನಗರಗಳಲ್ಲಿ ತಲೆಯೆತ್ತಿರುವ ಆಡಳಿತ ವಿರೋಧಿ ಪ್ರತಿಭಟನೆಗಳ ವಿರುದ್ಧ ಕಟುವಾಗಿ ಪ್ರತಿಕ್ರಿಯಿಸಿರುವ ಇರಾನ್ ಸರಕಾರವು, ಪ್ರತಿಭಟನಕಾರರು ತಮ್ಮ ಹಿಂಸಾತ್ಮಕ ಚಳವಳಿಯನ್ನು ನಿಲ್ಲಿಸದೆ ಇದ್ದಲ್ಲಿ ಭಾರೀ ಬೆಲೆ ತೆರಬೇಕಾದೀತು ಎಂದು ಎಚ್ಚರಿಕೆ ನೀಡಿದೆ.
‘‘ಸಾರ್ವಜನಿಕ ಸೊತ್ತುಗಳಿಗೆ ಹಾನಿಮಾಡುವ, ಕಾನೂನು, ಶಿಸ್ತಿಗೆ ಭಂಗ ತರುವವರು ತಮ್ಮ ವರ್ತನೆಗಳಿಗೆ ಬಾಧ್ಯಸ್ಥರಾಗಿರುತ್ತಾರೆ ಹಾಗೂ ಅದಕ್ಕಾಗಿ ಅವರು ಸೂಕ್ತ ಬೆಲೆಯನ್ನು ತೆರಬೇಕಾಗುತ್ತದೆ’’ ಎಂದು ಇರಾನ್ ಗೃಹ ಸಚಿವ ಅಬ್ದುರ್ರಹ್ಮಾನ್ ರಹಮಾನಿ ಫಾಝಿಲ್, ರವಿವಾರ ಸರಕಾರಿ ಟಿವಿ ವಾಹಿನಿಯಲ್ಲಿ ಮಾಡಿದ ಭಾಷಣದಲ್ಲಿ ಎಚ್ಚರಿಕೆ ನೀಡಿದ್ದಾರೆ.
ಇರಾನ್‌ನ ವಿವಿಧೆಡೆ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಕನಿಷ್ಠ ಇಬ್ಬರು ಮೃತಪಟ್ಟಿದ್ದು, ಹಲವಾರು ಮಂದಿಯನ್ನು ಬಂಧಿಸಲಾಗಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.
ಪಶ್ಚಿಮ ಇರಾನ್‌ನ ಪಟ್ಟಣವಾದ ದೊರುಡ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಇಬ್ಬರು ಸಾವನ್ನಪ್ಪಿರುವುದನ್ನು ಸರಕಾರಿ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ಆದರೆ ಪ್ರತಿಭಟನಕಾರರ ಮೇಲೆ ಭದ್ರತಾ ಪಡೆಗಳು ಗುಂಡುಹಾರಿಸಿವೆಯೆಂಬುದನ್ನು ಅವರು ನಿರಾಕರಿಸಿದ್ದಾರೆ.
ಆಡಳಿತ ವಿರೋಧಿಗಳ ಗುಂಪುಗಳು ನೀಡಿದ ಕರೆಗೆ ಸ್ಪಂದಿಸಿ ದೊರುಡ್‌ನಲ್ಲಿ ಕೆಲವು ಮಂದಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ದುರದೃಷ್ಟವಶಾತ್ ಈ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ’’ ಎಂದು ಅವರು ತಿಳಿಸಿದ್ದಾರೆ.
ಇರಾನ್‌ನಲ್ಲಿ ಹೆಚ್ಚುತ್ತಿರುವ ಜೀವನವೆಚ್ಚ ಹಾಗೂ ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಮಾಶಾದ್ ನಗರದಲ್ಲಿ ಆರಂಭಗೊಂಡ ಪ್ರತಿಭಟನೆಯು ಆನಂತರ ಆಡಳಿತ ವಿರೋಧಿ ಚಳವಳಿಯಾಗಿ ಮಾರ್ಪಟ್ಟು, ದೇಶದ ಇತರ ಭಾಗಗಳಿಗೂ ಹಬ್ಬಿತ್ತು.
ಇಸ್ಫಾಶಾನ್, ಮಶಾದ್ ಸೇರಿದಂತೆ ಇರಾನ್‌ನ ಹಲವಾರು ನಗರಗಳಲ್ಲಿ ಜನರು ಪ್ರತಿಭಟನೆಗಳನ್ನು ನಡೆಸುತ್ತಿರುವ ದೃಶ್ಯಗಳಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿವೆ.
ರಾಜಧಾನಿ ಟೆಹರಾನ್‌ನಲ್ಲಿ ಪ್ರತಿಭಟನಕಾರರು ಟೌನ್‌ಹಾಲ್ ಮೇಲೆ ದಾಳಿ ನಡೆಸಿರುವುದನ್ನು ಸರಕಾರಿ ಮೂಲಗಳು ದಾಳಿ ನಡೆಸಿವೆ. ದೇಶದ ಇತರೆಡೆಯೂ ಪ್ರತಿಭಟಕಾರರ ಗುಂಪುಗಳು ಬ್ಯಾಂಕ್‌ಗಳು ಹಾಗೂ ಮುನ್ಸಿಪಲ್ ಕಟ್ಟಡಗಳ ಮೇಲೆ ದಾಳಿ ನಡೆಸಿರುವುದನ್ನು ಕೆಲವು ವರದಿಗೆಳು ದೃಢಪಡಿಸಿವೆ.







