ಕೆಕೆಎಂಎ: ವಿದ್ಯಾರ್ಥಿ ವೇತನ, ಮನೆ ವಿತರಣೆ ಕಾರ್ಯಕ್ರಮ

ಮಂಗಳೂರು, ಡಿ. 31: ಕುವೈತ್-ಕೇರಳ ಮುಸ್ಲಿಮ್ ಅಸೋಸಿಯೇಶನ್ (ಕೆಕೆಎಂಎ) ವತಿಯಿಂದ ವಿದ್ಯಾರ್ಥಿ ವೇತನ, ಪ್ರಶಸ್ತಿ, ಉಚಿತ ಡಯಾಲಿಸಿಸ್ ಮತ್ತು ಕನಸಿನ ಮನೆ ವಿತರಣಾ ಸಮಾರಂಭವು ರವಿವಾರ ನಗರದ ಇಹ್ಸಾನ್ ಮಸೀದಿ ವಠಾರದಲ್ಲಿ ಜರುಗಿತು.
ಮಾಸ್ಟರ್ ಆದಂ ಆಹಿಲ್ ಫಾರೂಕ್ ಕಿರಾಅತ್ ಪಠಿಸುವುದರೊಂದಿಗೆ ಕಾರ್ಯಕ್ರಮ ಉದ್ಘಾಟನೆಗೊಂಡಿತು.
ಅಧ್ಯಕ್ಷತೆ ವಹಿಸಿದ್ದ ಕೆಕೆಎಂಎ ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷ ಎಸ್.ಎಂ. ಫಾರೂಕ್ ಮಾತನಾಡಿ, ಕಳೆದ 16 ವರ್ಷಗಳಲ್ಲಿ ಕೆಕೆಎಂಎ ವಿದ್ಯಾರ್ಥಿ ವೇತನ ನೀಡುತ್ತಾ ಬಂದಿದೆ. ಈ ರೀತಿ ವಿದ್ಯಾರ್ಥಿ ವೇತನ ಪೆಯುವ ವಿದ್ಯಾರ್ಥಿಗಳು ಉನ್ನತ ಸ್ಥಾನವನ್ನು ಅಲಂರಿಸಿ ಇದೇ ರೀತಿ ಮುಂದೆ ಅರ್ಹರಿಗೆ ವಿದ್ಯಾರ್ಥಿ ವೇತನ ನೀಡುವಂತಾಗಬೇಕು ಎಂದು ಹಾರೈಸಿದರು.
ಮುಖ್ಯ ಅತಿಥಿಯಾಗಿದ್ದ ಕೆಕೆಎಂಎ ಕುವೈತ್ ಸಮಿತಿಯ ಕರ್ನಾಟಕ ಬ್ರಾಂಚ್ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಮಾತನಾಡಿ, ಕೆಕೆಎಂಎ ಕುವೈತ್‌ನಲ್ಲಿ ಸಣ್ಣಸಣ್ಣ ಸಂಬಳದಲ್ಲಿರುವವರು ಒಟ್ಟು ಸೇರಿ ಮಾಡಿರುವ ಸಂಘಟನೆ. ತಮ್ಮ ದುಡಿಮೆಯ ಒಂದಂಶವನ್ನು ಸಮಾಜಕ್ಕೆ ಕೊಡುಗೆಯಾಗಿ ವಿದ್ಯಾರ್ಥಿ ವೇತನ ನೀಡುತ್ತಿದ್ದಾರೆ. ಇದನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ 10 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಐವರು ವಿದ್ಯಾರ್ಥಿಗಳನ್ನು ದತ್ತು, ಕಳೆದ ವರ್ಷ ಅತ್ಯುತ್ತಮ ಅಂಕಗಳನ್ನು ಗಳಿಸಿರುವ ಆರು ವಿದ್ಯಾರ್ಥಿಗಳಿಗೆ ಪ್ರಶಸ್ತಿ, 15 ಮಂದಿಗೆ ಉಚಿತ ಡಯಾಲಿಸಿಸ್ ಮೊತ್ತ ಮತ್ತು ಶಿರೂರಿನ ಸರ್ಫ್ರಾಝ್ ಎಂಬವರಿಗೆ ಕನಸಿನ ಮನೆ ಯೋಜನೆಯಡಿ ಮುಂಗಡ ಮೊತ್ತವನ್ನು ವಿತರಿಸಲಾಯಿತು.
ಇಕ್ಮಾ ಇಂಟರ್‌ನ್ಯಾಶನಲ್ ಅಕಾಡಮಿಯ ಅಧ್ಯಕ್ಷ ಆರ್ಕಿಟೆಕ್ಟ್ ನಿಸಾರ್, ನಾಝಿಂ ಎಸ್.ಎಸ್. ಮಾತನಾಡಿ, ಶುಭ ಹಾರೈಸಿದರು.
ಕೆಕೆಎಂಎ ಕರ್ನಾಟಕ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಹುಸೈನ್ ಶಾಫಿ ಸ್ವಾಗತಿಸಿದರು. ಎಸ್.ಎಂ.ಇಮ್ತಿಯಾಝ್ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷರಾದ ಇಬ್ರಾಹೀಂ ಮಾಸ್ಟರ್ ಶಿರೂರು ವಂದಿಸಿದರು.
ಎಚ್‌ಐಎಫ್ ಸದಸ್ಯರಾದ ನಾಝಿಂ ಎ.ಕೆ., ಸಾಜಿದ್ ಎ.ಕೆ., ನೌಶಾದ್ ಎ.ಕೆ., ಮುಹಮ್ಮದ್ ರಿಝ್ವಾನ್ ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು.







