ರಾಜ್ಯ ಸರಕಾರದ ಕಾರ್ಯವೈಖರಿಗೆ ಪಾಂಡಿಚೇರಿ ಮುಖ್ಯಮಂತ್ರಿ ಶ್ಲಾಘನೆ
► ಸುರತ್ಕಲ್‌ನಲ್ಲಿ ಸೌಹಾರ್ದ ಸಂಭ್ರಮ ► ಅಂಬೇಡ್ಕರ್ ಭವನ ಉದ್ಘಾಟನೆ

ಮಂಗಳೂರು, ಡಿ.31: ಹೊಸ ವರ್ಷವನ್ನು ವಿಶಿಷ್ಟವಾಗಿ ಆಚರಿಸುವ ನಿಟ್ಟಿನಲ್ಲಿ ಶಾಸಕ ಬಿ.ಎ.ಮೊಯ್ದಿನ್ ಬಾವಾರ ನೇತೃತ್ವದಲ್ಲಿ ಸೌಹಾರ್ದ ಸಂಭ್ರಮ, ಅಂಬೇಡ್ಕರ್ ಭವನ ಉದ್ಘಾಟನೆ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ 580ಕ್ಕೂ ಆಧಿಕ ಫಲಾನುಭವಿಗಳಿಗೆ 4 ಕೋ.ರೂ. ಮೊತ್ತದ ವಿವಿಧ ಸವಲತ್ತುಗಳು ಹಾಗೂ ಅರ್ಹ ಮಹಿಳೆಯರಿಗೆ ಶಾಸಕರ ವೈಯಕ್ತಿಕ ಖರ್ಚಿನಿಂದ ಸೀರೆ ವಿತರಣೆ ಕಾರ್ಯಕ್ರಮವು ರವಿವಾರ ಸುರತ್ಕಲ್‌ನ ಶ್ರೀನಿವಾಸ ಮಲ್ಯ ಭವನದಲ್ಲಿ ಜರಗಿತು.
ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಪಾಂಡಿಚೇರಿ ಮುಖ್ಯಮಂತ್ರಿ ನಾರಾಯಣ ಸ್ವಾಮಿ ರಾಜ್ಯ ಸರಕಾರದ ಕಾರ್ಯವೈಖರಿಗೆ ಶ್ಲಾಘನೆ ವ್ಯಕ್ತಪಡಿಸಿದರಲ್ಲದೆ, ಪಾಂಡಿಚೇರಿಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಪ್ರಸಕ್ತ ವರ್ಷ 1 ಲಕ್ಷಕ್ಕೂ ಅಧಿಕ ಮಂದಿ ದೇಶ-ವಿದೇಶದ ಜನರು ಪಾಂಡಿಚೇರಿಗೆ ಬಂದಿದ್ದಾರೆ. ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿಯೂ ತನ್ನ ಸರಕಾರ ಬಡ್ಡಿರಹಿತ ಸಾಲವನ್ನು ನೀಡುತ್ತಿದೆ. ಉದ್ಯಮಿಗಳಿಗೂ ಸಾಕಷ್ಟು ಪ್ರೋತ್ಸಾಹ ನೀಡಲಾಗುತ್ತದೆ. ಅಲ್ಲದೆ ಪ್ರತೀ ತಿಂಗಳು ಅರ್ಹ ಕುಟುಂಬಕ್ಕೆ 20 ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ. ರಾಜ್ಯ ಸರಕಾರ ಕೂಡ ಇಂತಹ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿವೆ. ಇಲ್ಲಿನ ಶಾಸಕರು ಕೂಡ ಅಭಿವೃದ್ಧಿ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫೆರ್ನಾಂಡೀಸ್, ಪಾಂಡಿಚೇರಿಯ ಕಾಂಗ್ರೆಸ್ ಮುಖಂಡ ಅರ್ಮುಗಮ್, ಅನಂತ ಪದ್ಮನಾಭ ಅಸ್ರಣ್ಣ, ಪೌಲ್ ಪಿಂಟೋ, ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೇಶವ ಸನಿಲ್, ಸುರೇಂದ್ರ ಕಾಂಬ್ಳಿ ಮತ್ತಿತರರು ಉಪಸ್ಥಿತರಿದ್ದರು.





