ಅಕ್ಷಯ್ ಶತಕ: ವಿದರ್ಭಕ್ಕೆ ಭಾರೀ ಮುನ್ನಡೆ
ಇಂದೋರ್, ಡಿ.31: ವಿಕೆಟ್ ಕೀಪರ್ ಅಕ್ಷಯ್ ವಿನೋದ್ ವಾಡ್ಕರ್ ಶತಕದ ನೆರವಿನಲ್ಲಿ ವಿದರ್ಭ ತಂಡ ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ದಿಲ್ಲಿ ವಿರುದ್ಧ ಭಾರೀ ಮುನ್ನಡೆ ಸಾಧಿಸಿದೆ. ಮೊದಲ ಬಾರಿ ರಣಜಿ ಟ್ರೋಫಿ ಎತ್ತುವ ಕಡೆಗೆ ಚಿತ್ತವಿರಿಸಿದೆ. ರವಿವಾರ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯದ ಮೂರನೇ ದಿನದಾಟದಂತ್ಯಕ್ಕೆ ವಿದರ್ಭ 156 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟದಲ್ಲಿ 528 ರನ್ ಗಳಿಸಿದ್ದು, 233 ರನ್‌ಗಳ ಮುನ್ನಡೆ ಸಾಧಿಸಿದೆ.
133 ರನ್(243ಎ, 16ಬೌ,1ಸಿ) ಗಳಿಸಿರುವ ಅಕ್ಷಯ್ ವಾಡ್ಕರ್ ಮತ್ತು 56 ರನ್ ಗಳಿಸಿರುವ ಸಿದ್ದೇಶ್ ನೆರಲ್ ಔಟಾಗದೆ ಕ್ರೀಸ್‌ನಲ್ಲಿದ್ದಾರೆ.
ವಸೀಮ್ ಜಾಫರ್ ಮತ್ತು ಖಾತೆ ತೆರೆಯದ ಅಕ್ಷಯ್ ವಾಖರೆ ಇಂದು ಬ್ಯಾಟಿಂಗ್ ಮುಂದುವರಿಸಿ ತಂಡದ ಸ್ಕೋರ್‌ನ್ನು 237ಕ್ಕೆ ಏರಿಸಿದರು. 17 ರನ್ ಗಳಿಸಿದ ವಾಖರೆ ಅವರು ನವ್‌ದೀಪ್ ಸೈನಿಗೆ ವಿಕೆಟ್ ಒಪ್ಪಿಸುವುದರೊಂದಿಗೆ 5ನೇ ವಿಕೆಟ್ ಪತನಗೊಂಡಿತು.
ವಸೀಮ್ ಜಾಫರ್ 78 ರನ್ ಗಳಿಸಿ ನಿರ್ಗಮಿಸಿದರು. ಆದಿತ್ಯ ಸರ್ವಾಟೆ ಮತ್ತು ಅಕ್ಷಯ್ ವಾಡ್ಕರ್ 7ನೇ ವಿಕೆಟ್ ಜೊತೆಯಾಟದಲ್ಲಿ 169 ರನ್ ಸೇರಿಸಿ ತಂಡಕ್ಕೆ ಮುನ್ನಡೆ ದೊರಕಿಸಿಕೊಟ್ಟರು. ಆದಿತ್ಯ ಸರ್ವಾಟೆ 79 ರನ್ ಗಳಿಸಿ ನಿತೀಶ್ ರಾಣಾ ಬೌಲಿಂಗ್‌ನಲ್ಲಿ ಪಂತ್‌ಗೆ ಕ್ಯಾಚ್ ನೀಡಿದರು.
ಎಂಟನೇ ವಿಕೆಟ್‌ಗೆ ವಾಡ್ಕರ್ ಮತ್ತು ಸಿದ್ದೇಶ್ ನೆರಲ್ ಮುರಿಯದ ಜೊತೆಯಾಟದಲ್ಲಿ 113 ರನ್ ಸೇರಿಸಿ ಬ್ಯಾಟಿಂಗ್‌ನ್ನು ನಾಲ್ಕನೇ ದಿನಕ್ಕೆ ಕಾಯ್ದಿರಿಸಿದರು.
ಅಕ್ಷಯ್ ವಾಡ್ಕರ್ ಶತಕ ದಾಖಲಿಸಿದ್ದಾರೆ. ಸಿದ್ದೇಶ್ ನೆರಲ್ ತನ್ನ 5ನೇ ಪಂದ್ಯದಲ್ಲಿ ಚೊಚ್ಚಲ ಪ್ರಥಮ ದರ್ಜೆ ಅರ್ಧಶತಕವಾಗಿದೆ.
ವಾಡ್ಕರ್ 5ನೇ ಪ್ರಥಮ ದರ್ಜೆ ಪಂದ್ಯದಲ್ಲಿ ಚೊಚ್ಚಲ ಶತಕ ದಾಖಲಿಸಿದರು. 134ನೇ ಓವರ್‌ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ವಾಡ್ಕರ್ ಮೊದಲ ಶತಕ ಪೂರೈಸಿದರು. 172 ಎಸೆತಗಳಲ್ಲಿ ಅವರು ಶತಕ ಗಳಿಸಿದರು.
ನವ್‌ದೀಪ್ ಸೈನಿ 126ಕ್ಕೆ 3 ವಿಕೆಟ್, ಆಕಾಶ್ ಸುದಾನ್ 102ಕ್ಕೆ 2, ನಿತೀಶ್ ರಾಣಾ ಮತ್ತು ಕುಲ್ವಂತ್ ತಲಾ 1 ವಿಕೆಟ್ ಪಡೆದರು.







