ವಿಜಯೋತ್ಸವದ ವೇಳೆ ದಲಿತರ ಮೇಲೆ ಸಂಘಪರಿವಾರದಿಂದ ಕಲ್ಲೆಸೆತ; ಉದ್ವಿಗ್ನ
ಭೀಮಾ ಕೋರೆಗಾಂವ್ನ 200ನೇ ವರ್ಷಾಚರಣೆ

ಪುಣೆ, ಜ.1: ಮಹಾರಾಷ್ಟ್ರದ ಕೋರೆಗಾಂವ್ನಲ್ಲಿ ಸೋಮವಾರ ನಡೆಯುತ್ತಿದ್ದ ‘ಭೀಮ ಕೋರೆಗಾಂವ್ ಸಂಗ್ರಾಮ’ದ 200ನೇ ವಿಜಯೋತ್ಸವದ ಸಂದರ್ಭ ಸೇರಿದ್ದ ಜನರ ಮೇಲೆ ಸಂಘಪರಿವಾರದ ಕಾರ್ಯಕರ್ತರು ಕಲ್ಲೆಸೆದಿದ್ದಾರೆ. ಇದರಿಂದ ಈ ಪ್ರದೇಶ ಉದ್ವಿಗ್ನಗೊಂಡಿದ್ದು, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಸೋಮವಾರ ಮಧ್ಯಾಹ್ನ 12 ಗಂಟೆ ವೇಳೆಗೆ ಈ ಘಟನೆ ನಡೆದಿದೆ. ಈ ಘಟನೆಯ ಬಳಿಕ ಭೀಮ ಕೋರೆಗಾಂವ್ ವಿಜಯಸ್ತಂಭದತ್ತ ತೆರಳುತ್ತಿದ್ದ ವಾಹನಗಳ ಮೇಲೂ ಸಂಘಪರಿವಾರದ ಕಾರ್ಯಕರ್ತರು ಕಲ್ಲೆಸೆದಿದ್ದಾರೆ. ಈ ಸಂದರ್ಭ ನಡೆದ ಹಿಂಸಾಚಾರದಲ್ಲಿ ದುಷ್ಕರ್ಮಿಗಳು ಹಲವು ವಾಹನಗಳನ್ನು ಜಖಂಗೊಳಿಸಿ ಬೆಂಕಿಹಚ್ಚಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಯುವ ವಿಜಯಸ್ತಂಭಕ್ಕೆ ತೆರಳುವುದನ್ನು ಪೊಲೀಸರು ತಡೆದಿದ್ದಾರೆ.
ಬ್ರಾಹ್ಮಣ ಪೇಶ್ವೆ ನೇತೃತ್ವದ ಮರಾಠಾ ಸಾಮ್ರಾಜ್ಯದ ಅಸ್ಪಶ್ಯತೆ ಆಚರಣೆ ವಿರುದ್ಧ ಮಹಾರ್ (ದಲಿತ) ಯೋಧರು 1818ರಲ್ಲಿ ಗೆಲುವು ಸಾಧಿಸಿರುವುದಕ್ಕೆ 2018 ಜನವರಿ 1ರಂದು 200 ವರ್ಷ. ಈ ಹಿನ್ನೆಲೆಯಲ್ಲಿ ರವಿವಾರ ಪುಣೆಯ ಶನಿವಾರ್ ವಾಡ್ನಲ್ಲಿ ಬೃಹತ್ ಸಮಾವೇಶ ಮತ್ತು ಭೀಮಾನದಿ ತೀರದ ಕೋರೆಗಾಂವ್ವರೆಗೆ ಜಾಥಾ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಪಾಲ್ಗೊಂಡಿದ್ದರು. ಬಲಪಂಥೀಯ ಸಂಘಟನೆಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು.
ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ಶಾಂಬಾಜಿ ಮಹಾರಾಜರ ಹತ್ಯೆಯಾಗಿದ್ದ ವಧು ಬದ್ರುಕ್ನಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಇದು ಮಹಾರ್ ಜಾತಿಗೆ ಸೇರಿದ ಗಣಪತ್ ಗಾಯಕ್ವಾಡ್ ಅವರ ಗ್ರಾಮ ಹಾಗೂ ಔರಂಗಜೇಬರ ಆದೇಶ ಉಲ್ಲಂಘಿಸಿ ಸಂಭಾಜಿಯ ಅಂತ್ಯ ಸಂಸ್ಕಾರ ನಡೆಸಿದ ಸ್ಥಳ. ಕಳೆದ ವಾರ ಗಾಯಕ್ವಾಡ್ ಸ್ಮಾರಕದ ಮೇಲೆ ದಾಳಿ ನಡೆಸಲಾಗಿದೆ ಎಂದು ಶಿರೂರ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕುಂಟೆ ಹೇಳಿದ್ದಾರೆ.