ಸೌದಿ ಸರಕಾರಿ ಕ್ರಮದ ಶ್ರೇಯಸ್ಸು ಪಡೆಯಲು ಪ್ರಧಾನಿ ಮೋದಿ ಯತ್ನ: ಉವೈಸಿ ಟೀಕೆ
ಮೆಹ್ರಮ್ ಇಲ್ಲದೆ ಮಹಿಳೆಯರಿಗೆ ಹಜ್ ನಿರ್ವಹಣೆಗೆ ಅವಕಾಶ

ಹೊಸದಿಲ್ಲಿ, ಜ.2 : ನಲ್ವತ್ತೈದು ವರ್ಷ ಮೇಲ್ಪಟ್ಟ ಮಹಿಳೆಯರು ಮೆಹ್ರಮ್ ಅಥವಾ ಹತ್ತಿರದ ಪುರುಷ ಸಂಬಂಧಿಗಳಿಲ್ಲದೆಯೇ ಹಜ್ ಯಾತ್ರೆಗೆ ತೆರಳಲು ಅನುಮತಿಸುವ ನಿಯಮವೊಂದು ಈಗಾಗಲೇ ಸೌದಿಯಲ್ಲಿ ಜಾರಿಯಲ್ಲಿರುವ ಹೊರತಾಗಿಯೂ ಪ್ರಧಾನಿ ನರೇಂದ್ರ ಮೋದಿ ಇಂತಹ ಒಂದು ಕ್ರಮದ ಶ್ರೇಯಸ್ಸನ್ನು ತಾವು ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾಸುದ್ದೀನ್ ಉವೈಸಿ ಹೇಳಿದ್ದಾರೆ.
ಸೌದಿ ಅರೇಬಿಯಾ ತನ್ನ ಹಜ್ ನಿಯಮಾವಳಿಗೆ ಮೂರು ವರ್ಷಗಳ ಹಿಂದೆಯೇ ತಿದ್ದುಪಡಿ ತಂದಿದ್ದರೂ ಮೋದಿ ಸರಕಾರ 2017ರ ದ್ವಿತೀಯಾರ್ಧದಲ್ಲಿ ಇಂತಹ ಒಂದು ನಿಯಮ ತಂದಿದೆ ಎಂದು ಉವೈಸಿ ಹೇಳಿದ್ದಾರೆ.
ರವಿವಾರದ ತಮ್ಮ ಮನ್ ಕಿ ಬಾತ್ ನಲ್ಲಿ ಮಾತನಾಡುತ್ತಾ ಮೋದಿ, ತಮ್ಮ ಸರಕಾರ 45 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಹಜ್ ಯಾತ್ರೆ ಕೈಗೊಳ್ಳಲು ಇದ್ದ ಅಡ್ಡಿಯನ್ನು ನಿವಾರಿಸಿದೆ ಎಂದು ಹೇಳಿಕೊಂಡಿದ್ದಕ್ಕೆ ಪ್ರತಿಯಾಗಿ ಉವೈಸಿ ಹೇಳಿಕೆ ನೀಡಿದ್ದಾರೆ. ‘‘ಇಂತಹ ಒಂದು ಕ್ರಮವನ್ನು ಸೌದಿ ಅಧಿಕಾರಿಗಳು ಕೈಗೊಂಡಿದ್ದಾರೆ. ವಿದೇಶಿ ಸರಕಾರವೊಂದು ಕೈಗೊಂಡಿರುವ ಕ್ರಮದ ಶ್ರೇಯಸ್ಸನ್ನು ಮೋದಿ ತಾವು ಪಡೆಯುವುದು ಸರಿಯಲ್ಲ’’ ಎಂದು ಉವೈಸಿ ಹೇಳಿದ್ದಾರೆ.
ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹಜ್ ನಿಯಮ ಬದಲಾವಣೆಯ ಸಂಪೂರ್ಣ ಶ್ರೇಯಸ್ಸು ತಮ್ಮ ಸರಕಾರಕ್ಕೆ ಸಲ್ಲುವುದು ಎಂದು ಮೋದಿ ಹೇಳಿದ್ದಲ್ಲದೆ, ಇಂತಹ ಒಂದು ಕ್ರಮ ಚಾಲ್ತಿಯಲ್ಲಿತ್ತು ಎಂದು ತಿಳಿದು ತಮಗೆ ಅಚ್ಚರಿಯಾಗಿತ್ತು ಎಂದಿದ್ದರು. ‘‘ನಾಲ್ಕು ದಶಕಗಳ ಕಾಲ ಮುಸ್ಲಿಂ ಮಹಿಳೆಯರಿಗೆ ಅನ್ಯಾಯ ಮಾಡಲಾಗಿತ್ತು, ಆದರೆ ಅದರ ಬಗ್ಗೆ ಚರ್ಚೆಗಳೇ ಇರಲಿಲ್ಲ’’ ಎಂದಿದ್ದರು.
ಈ ನಿಯಮವನ್ನು ತಂದಿದ್ದು ಭಾರತವಲ್ಲ, ಬದಲಾಗಿ ಮೆಹ್ರಮ್ ಅಥವಾ ಹತ್ತಿರದ ಸಂಬಂಧಿಯಿಲ್ಲದೆ ಯಾವುದೇ ಮಹಿಳೆ ಹಜ್ ಯಾತ್ರ ಕೈಗೊಳ್ಳುವಂತಿಲ್ಲ ಎಂಬ ನಿಯಮವನ್ನು ಸೌದಿ ಸರಕಾರವೇ ತಂದಿತ್ತು ಹಾಗೂ ಮೂರು ವರ್ಷಗಳ ಹಿಂದೆ ಈ ನಿಯಮವನ್ನು ವಾಪಸ್ ಪಡೆದಿತ್ತು. ಅಂತೆಯೇ 45 ವರ್ಷದ ಕೆಳಗಿನ ಮಹಿಳೆಯರು ಹಜ್ ಯಾತ್ರೆಗೆ ಪುರುಷರು ಜತೆಯಿಲ್ಲದೆ ಹೋಗಬಾರದೆಂಬ ನಿಯಮವನ್ನೂ ಅಲ್ಲಿನ ಸರಕಾರವೇ ಕೈಗೊಂಡಿತ್ತು.