ಗ್ರಾಮೀಣ ಮಹಿಳೆಯರು ಜನಪದ, ಸಂಸ್ಕೃತಿಯನ್ನು ಉಳಿಸಿ ಬೆಳೆಸಿದವರು: ಡಾ. ಎಸ್.ಬಾಲಾಜಿ

ಅಜ್ಜಂಪುರ, ಜ.2: ಜನಪದ ಸಾಹಿತ್ಯವನ್ನು ಗ್ರಾಮೀಣ ಪ್ರದೇಶದ ಮಹಿಳೆಯರು ಉಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದಾರೆ. ಈ ನೆಲದ ಸಂಸ್ಕೃತಿಯನ್ನು ಕಟ್ಟಿಕೊಟ್ಟವರು ಜನಪದರು ಎಂದು ಕಜಾಪ ಕಾರ್ಯಧ್ಯಕ್ಷ ಡಾ. ಎಸ್.ಬಾಲಾಜಿ ತಿಳಿಸಿದರು.
ಅವರು ಸೊಲ್ಲಾಪುರದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿದ್ದ ಜಿಲ್ಲಾ ಕನ್ನಡ ಜಾನಪದ ಪರಿಷತ್ ಹೋಬಳಿ ಮತ್ತು ತಾಲ್ಲೂಕು, ಹೋಬಳಿ ಘಟಕಗಳ ಆಶ್ರಯದಲ್ಲಿ ಸುಗ್ಗಿಹಬ್ಬದಲ್ಲಿ ಜಾನಪದ ಸಂಭ್ರಮ ಮಾಸಾಚರಣೆಯ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಜನಪದ ಕಲಾ ಪ್ರಕಾರವನ್ನು ಉಳಿಸಿ ಬೆಳೆಸಬೇಕು. ನಮ್ಮ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚು ಮಹತ್ವವನ್ನು ಕೊಟ್ಟು ಅವುಗಳನ್ನು ರೂಢಿಸಿಕೊಳ್ಳಬೇಕು. ಪ್ರತಿಯೊಂದು ಸಮುದಾಯದಲ್ಲೂ ಜನಪದ ಸಂಸ್ಕೃತಿಯನ್ನು ಕಾಣಬಹುದಾಗಿದೆ. ಮುಸ್ಲಿಂ, ಜೈನ, ಕ್ರೈಸ್ತ, ಹೀಗೆ ಎಲ್ಲ ಸಮುದಾಯದವರೂ ಸಹ ತಮ್ಮ ತಮ್ಮ ಪರಂಪರೆಯಲ್ಲಿ ಜನಪದ ಸಂಸ್ಕೃತಿಯನ್ನು ರೂಢಿಸಿಕೊಂಡಿರುವುದನ್ನು ಕಾಣಬಹುದಾಗಿದೆ. ಎಂದು ನುಡಿದರು.
ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಜನಪದ ಸಂಸ್ಕೃತಿ ನಮ್ಮ ನೆಲದ ಸಂಸ್ಕೃತಿಯನ್ನು ತಿಳಿಸುತ್ತದೆ. ಜನಪದ ಹಾಡು, ಮತ್ತು ನೃತ್ಯದಿಂದ ವ್ಯಕ್ರಿತ್ವ ವಿಕಾಸವಾಗುತ್ತದೆ. ಜನಪದ ಸಾಹಿತ್ಯ ವಿಶ್ವದ ಇತರೆ ಎಲ್ಲಾ ಸಾಹಿತ್ಯಕ್ಕೂ ತಾಯಿ ಬೇರು ಇದ್ದಂತೆ ಎಂದು ತಿಳಿಸಿದರು.
ತರೀಕೆರೆ ತಾಲ್ಲೂಕು ಕಜಾಪ ಅಧ್ಯಕ್ಷ ಅಜ್ಜಂಪುರದ ಎ.ಸಿ.ಚಂದ್ರಪ್ಪ ಮಾತನಾಡಿ, ಗ್ರಾಮೀಣ ಪ್ರದೇಶದ ಮಹಿಳೆಯರು ತಮ್ಮ ಕೃಷಿ ಚಟುವಟಿಕೆ ಮತ್ತು ಇನ್ನಿತರ ಕಾರ್ಯಕ್ರಮಗಳಲ್ಲಿ ಹಾಡುಗಳನ್ನು ಹಾಡುತ್ತಾ ತಮ್ಮ ದೈನಂದಿನ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ತಮ್ಮ ಶ್ರಮವನ್ನು ಮರೆಯುವ ಸಲುವಾಗಿ ಜಾನಪದ ಹಾಡುಗಳನ್ನು ಹಾಡುತ್ತಿದ್ದರು. ಜಾನಪದ ಕಲಾವಿದೆ ಸೊಲ್ಲಾಪುರದ ತಾಯಮ್ಮ ಅವರಲ್ಲಿರುವ ಜಾನಪದ ಕಲಾ ಪ್ರಕಾರಗಳಾದ ಸೋಬಾನೆ ಪದಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕಾಗಿದೆ ಎಂದು ತಿಳಿಸಿದರು.
ಸೊಲ್ಲಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು. ಚೌಳಹಿರಿಯೂರಿನ ಹೋಬಳಿ ಕಜಾಪ ಅಧ್ಯಕ್ಷ ಹೆಚ್.ಎಸ್.ಬಸವರಾಜಪ್ಪ, ಸರ್ಕಾರಿ ಪ್ರೌಢಶಾಲಾ ಶಿಕ್ಷಕ ಈಶ್ವರಪ್ಪ ಮಾತನಾಡಿದರು. ಕಜಾಪ ನೂತನ ಸಂವತ್ಸರದ ಕ್ಯಾಲೆಂಡರ್‍ನ್ನು ಡಾ|| ಎಸ್. ಬಾಲಾಜಿ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಸೋಬಾನೆ ಪದಗಳನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೊಲ್ಲಾಪುರದ ತಾಯಮ್ಮ, ಹಾಗೂ ಗಿರಿಯಾಪುರದ ಕಮಲಾಕ್ಷಮ್ಮ, ಅಂಬಿಕಾ, ಟಿ.ಎನ್. ಮಂಜುಳಾ ಮತ್ತು ಕಾಟಿಗನೆರೆ ವಿಜಯಕುಮಾರಿ, ಜಾನಪದ ಗೀತೆಗಳನ್ನು ಹಾಡಿದರೆ ಹಾಗೂ ಜಾನಪದ ಪ್ರಪಂಚ ಪ್ರಶಸ್ತಿ ಪುರಸ್ಕೃತರಾದ ಗಡೀಹಳ್ಳಿ ಪದ್ಮಾವತಮ್ಮ ತತ್ವಪದಗಳನ್ನು ಚೌಳಹಿರಿಯೂರಿನ ಭೋಗಪ್ಪ, ಲಾಲಿ ಹಾಡುಗಳನ್ನು ಹಾಡುವ ಮುಖಾಂತರ ಜಾನಪದ ಸೊಗಡಿನ ರಸದೌತಣವನ್ನು ಕೇಳುಗರಿಗೆ ಉಣಬಡಿಸಿದರು.







