ಕಾಪು ನಗರಾಭಿವೃದ್ಧಿ ಪ್ರಾಧಿಕಾರ ಕೈಬಿಡಲು ಒತ್ತಾಯಿಸಿ ಎಸ್‍ಡಿಪಿಐ ಪ್ರತಿಭಟನೆ

ಕಾಪು,ಜ.2 : ಕಾಪುವಿನಲ್ಲಿ ಆರಂಭಿಸಿರುವ ಕಾಪು ನಗರಾಭಿವೃದ್ಧಿ ಪ್ರಾಧಿಕಾರದಿಂದ ಜನರಿಗೆ ಸಮಸ್ಯೆಯಾಗುತಿದ್ದು, ಕೂಡಲೇ ಇದನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಕಾಪು ಕ್ಷೇತ್ರ ಸೋಶಿಯಲ್ ಡೇಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಪ್ರಾಧಿಕಾರದ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಯಿತು.
ಎಸ್‍ಡಿಪಿಐ ಕಾಪು ಪುರಸಭಾ ಸಮಿತಿಯ ಅಧ್ಯಕ್ಷ ಹನೀಫ್ ಮೂಳೂರು ಮಾತನಾಡಿ, ಕಾಪು ನಗರಾಭಿವೃದ್ಧಿ ಪ್ರಾಧಿಕಾರವನ್ನು ರಾಜಕೀಯ ಲಾಭಪಡೆಯುವ ಉದ್ದೇಶದಿಂದ ಶಾಸಕರು ಅಸ್ತಿತ್ವಕ್ಕೆ ತಂದಿದ್ದಾರೆ. ಇದರಿಂದ ಸ್ಥಳೀಯ ಗ್ರಾಮ ಪಂಚಾಯಿತಿನ ನಾಗರೀಕರಿಗೆ ಹಲವು ಸಮಸ್ಯೆಗಳು ಉದ್ಬವವಾಗಿದೆ. ಕಾಪುವಿನ ಹೆಚ್ಚಿನ ಪ್ರದೇಶವು ಗ್ರಾಮೀಣ ಪ್ರದೇಶವಾಗಿದ್ದು, ಮೂಲಸೌಕರ್ಯದಿಂದ ವಂಚಿತರಾಗಿದ್ದಾರೆ. ಪ್ರಾಧಿಕಾರದ ಕಾನೂನಿನಿಂದ ಗ್ರಾಮೀಣ ಪ್ರದೇಶದ ಜನರು ಸಮಸ್ಯೆ ಅನುಭವಿಸುತಿದ್ದಾರೆ. ಈ ಪ್ರಾಧಿಕಾರವನ್ನು ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯ ಆರಂಭದಲ್ಲಿ ಕಾಪುವಿನ ವಿದ್ಯಾನಿಕೇತನ ಶಾಲೆಯ ಬಳಿಯಿಂದ ಕಾಪು ಪ್ರಾಧಿಕಾರದ ಕಚೇರಿಯವರೆಗೆ ಪ್ರತಿಭಟನಾ ಜಾಥಾ ನಡೆಯಿತು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ನಗರಾಭಿವೃದ್ಧಿ ಪ್ರಾಧಿಕಾರದ ವಿರುದ್ಧ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೆಹ್ಮಾನ್ ಮಲ್ಪೆ, ನ್ಯಾಯವಾದಿ ಉಮೇಶ್ ಕತ್ತಿ, ಕಾಪು ಕ್ಷೇತ್ರ ಅಧ್ಯಕ್ಷ ನಝೀರ್ ಕಾಪು, ಕಾರ್ಯದರ್ಶಿ ಫಹೀಮ್ ಬೆಳಪು, ಜಿಲ್ಲಾ ಸದಸ್ಯರಾದ ಸಾದಿಕ್ ಉಡುಪಿ, ಝುಲ್ಪಿಕರ್ ಕಾಪು ಉಪಸ್ಥಿತರಿದ್ದರು.
ವೃತ್ತನಿರೀಕ್ಷಕರ ವಿರುದ್ಧ ಆಕ್ರೋಶ: ಕಾಪುವಿನ ನಗರಾಭಿವೃದ್ಧಿ ಪ್ರಾಧಿಕಾರದ ವಿರುದ್ಧ ಪ್ರತಿಭಟನೆಯನ್ನು ನಡೆಸಲು ಅನುಮತಿ ಪಡೆಯಲು ವೃತ್ತನಿರೀಕ್ಷಕ ಹಾಲಮೂರ್ತಿ ಅವರ ಬಳಿ ಸಂಘಟಕರು ತೆರಳಿದಾಗ ಇಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದಿದ್ದರು ಎಂದು ಆರೋಪಿಸಿರುವ ಪ್ರತಿಭಟನಾಕಾರರು ಪ್ರತಿಭಟನೆಯ ವೇಳೆ ಹಾಲಮೂರ್ತಿಯವರ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿ ಇಷ್ಟೊಂದು ಜನ ಸೇರಿ ಪ್ರತಿಭಟನೆ ನಡೆಸುವುದು ಸಮಸ್ಯೆ ಇರುವುದರಿಂದ. ನೀವು ಯಾವುದೇ ಸಮಸ್ಯೆ ಇಲ್ಲ ಎನ್ನುತ್ತೀರಿ. ನಿಮ್ಮ ಕೆಲಸವನ್ನು ನೀವು ನೋಡಿಕೊಳ್ಳಿ ಎಂದು ಹನೀಫ್ ಮೂಳೂರು ಹೇಳಿದರು.







