ಅಂತರ್ ಧರ್ಮೀಯ ವಿವಾಹಕ್ಕೆ ಪ್ರೋತ್ಸಾಹಧನ ನೀಡುವ ಯೋಜನೆಯಿಲ್ಲ: ಕೇಂದ್ರ ಸರಕಾರ

ಹೊಸದಿಲ್ಲಿ, ಜ.2: ಅಂತರ್‌ಜಾತೀಯ ವಿವಾಹಕ್ಕೆ ನೀಡಲಾಗುತ್ತಿರುವ ಪ್ರೋತ್ಸಾಹಧನ ವ್ಯವಸ್ಥೆಯನ್ನು ಅಂತರ್‌ಧರ್ಮೀಯ ವಿವಾಹಕ್ಕೂ ಅನ್ವಯಿಸುವ ಯಾವುದೇ ಯೋಜನೆಗಳಿಲ್ಲ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಸಹಾಯಕ ಸಚಿವ ಕೇಂದ್ರ ಸಚಿವ ವಿಜಯ್ ಸಂಪ್ಲಾ ತಿಳಿಸಿದ್ದಾರೆ.
ಡಾ ಅಂಬೇಡ್ಕರ್ ಸಾಮಾಜಿಕ ಏಕೀಕರಣ ಯೋಜನೆಯನ್ನು ಅಂತರ್‌ಧರ್ಮೀಯ ವಿವಾಹಕ್ಕೂ ವಿಸ್ತರಿಸುವ ಯಾವುದೇ ಪ್ರಸ್ತಾವನೆಯಿಲ್ಲ ಎಂದು ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಸಚಿವರು ತಿಳಿಸಿದರು.
1955ರ ನಾಗರಿಕ ಹಕ್ಕು ಸುರಕ್ಷಾ ಕಾಯ್ದೆಯ ಅನ್ವಯ ಮತ್ತು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ 1989ರ ಅನ್ವಯ, ಅಂತರ್‌ಜಾತೀಯ ವಿವಾಹಕ್ಕೆ 2.5 ಲಕ್ಷ ರೂ. ಪ್ರೋತ್ಸಾಹ ಧನ ನೀಡಲಾಗುತ್ತದೆ.(ಇಲ್ಲಿ ವರ ಅಥವಾ ವಧು- ಇವರಲ್ಲಿ ಒಬ್ಬರು ಪರಿಶಿಷ್ಟ ಜಾತಿಗೆ ಸೇರಿದರಾಗಿರಬೇಕು). ವಿವಾಹವನ್ನು ಹಿಂದೂ ವಿವಾಹ ಕಾಯ್ದೆ 1955ರಡಿ ನೋಂದಣಿ ಮಾಡಿಕೊಳ್ಳಬೇಕು ಎಂದು ಸಚಿವ ವಿಜಯ್ ಸಂಪ್ಲಾ ತಿಳಿಸಿದ್ದಾರೆ. ಅಲ್ಲದೆ ಪ್ರೋತ್ಸಾಹ ಧನವನ್ನು ಹೆಚ್ಚಿಸುವ ಯಾವುದೇ ಇರಾದೆಯನ್ನು ಸರಕಾರ ಹೊಂದಿಲ್ಲ ಎಂದೂ ಸಚಿವರು ತಿಳಿಸಿದರು.
ಯೋಜನೆಯ ಪ್ರಕಾರ 2.5 ಲಕ್ಷ ರೂಪಾಯಿಯ ಹೊರೆಯನ್ನು ರಾಜ್ಯ ಹಾಗೂ ಕೇಂದ್ರ ಸರಕಾರಗಳು 50:50 ಅನುಪಾತದಲ್ಲಿ ಹಂಚಿಕೊಳ್ಳಬೇಕು. ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಯೋಜನೆಯ ಪೂರ್ಣ ಹಣವನ್ನು ಕೇಂದ್ರ ಸರಕಾರವೇ ಭರಿಸುತ್ತದೆ.