ಎನ್‌ಎಂಸಿ ಮಸೂದೆ ಸ್ಥಾಯಿ ಸಮಿತಿಯ ಪರಿಶೀಲನೆಗೆ

ಹೊಸದಿಲ್ಲಿ,ಜ.2: ಭಾರತೀಯ ವೈದ್ಯಕೀಯ ಮಂಡಳಿ(ಎಂಸಿಐ)ಯ ಬದಲು ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್‌ಎಂಸಿ)ವನ್ನು ರಚಿಸುವ ಉದ್ದೇಶ ಹೊಂದಿರುವ ಎಂಎಂಸಿ ಮಸೂದೆ,2017ನ್ನು ಮಂಗಳವಾರ ಸಂಸದೀಯ ಸ್ಥಾಯಿಸಮಿತಿಯ ಪರಿಶೀಲನೆಗಾಗಿ ಒಪ್ಪಿಸಲಾಗಿದೆ.
ಪರ್ಯಾಯ ಮತ್ತು ಸಾಂಪ್ರದಾಯಿಕ ವೈದ್ಯಕೀಯ ವೃತ್ತಿ ನಡೆಸುವವರಿಗೆ ಅಲೋಪತಿ ಪ್ರಾಕ್ಟೀಸ್‌ಗೆ ಅವಕಾಶ ಕಲ್ಪಿಸುವ ಮಸೂದೆಯನ್ನು ವಿರೋಧಿಸಿ ದೇಶಾದ್ಯಂತ 2.9 ಲಕ್ಷಕ್ಕೂ ಅಧಿಕ ವೈದ್ಯರು ಮಂಗಳವಾರ 12 ಗಂಟೆಗಳ ಮುಷ್ಕರವನ್ನು ನಡೆಸಿದ್ದರು.
ಮುಂಗಡಪತ್ರ ಅಧಿವೇಶನಕ್ಕೆ ಮುನ್ನ ತನ್ನ ಶಿಫಾರಸನ್ನು ಸಲ್ಲಿಸುವಂತೆ ಸಂಸದೀಯ ಸಮಿತಿಗೆ ಸೂಚಿಸುವಂತೆ ಲೋಕಸಭಾ ಸ್ಪೀಕರ್‌ರನ್ನು ಕೋರಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್ ತಿಳಿಸಿದರು.
ಉದ್ದೇಶಿತ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ಅಧ್ಯಕ್ಷ ಮತ್ತು ಸದಸ್ಯರನ್ನು ಸಂಪುಟ ಕಾರ್ಯದರ್ಶಿಗಳ ಅಧೀನದ ಸಮಿತಿಯು ಆಯ್ಕೆ ಮಾಡಲಿದೆ. ಹೀಗಾಗಿ ಆಯೋಗವನ್ನು ಸರಕಾರವೇ ನಡೆಸಲಿದೆ ಎಂಬ ಆತಂಕದಿಂದ ವೈದ್ಯರು ಮಸೂದೆಯನ್ನು ವಿರೋಧಿಸು ತ್ತಿದ್ದಾರೆ.
ಬೆಳಗ್ಗೆ ಸಂಸತ್ತಿನ ಉಭಯ ಸದನಗಳಲ್ಲಿ ಶೂನ್ಯವೇಳೆಯಲ್ಲಿ ವೈದ್ಯರ ಮುಷ್ಕರವು ಪ್ರಸ್ತಾಪಗೊಂಡಿತ್ತು.