ಚನ್ನಪಟ್ಟಣದಲ್ಲಿ ಬಿಜೆಪಿ ಗೆಲ್ಲುವುದಿಲ್ಲ: ಡಿ.ಕೆ.ಶಿವಕುಮಾರ್

ಬೆಂಗಳೂರು, ಜ.2: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಗೆಲ್ಲುವುದಿಲ್ಲ. ಬೇಕಾದರೆ, ನಾನು ಈ ವಿಚಾರದಲ್ಲಿ ಬಾಜಿ ಕಟ್ಟುತ್ತೇನೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸವಾಲು ಹಾಕಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಅಭಿವೃದ್ಧಿ ರಾಜಕಾರಣ ಮಾಡುತ್ತೇವೆಯೇ ಹೊರತು, ಆ ಕ್ಷೇತ್ರವನ್ನು ಈಗ ಪ್ರತಿನಿಧಿಸುತ್ತಿರುವ ಶಾಸಕರ ರೀತಿಯಲ್ಲಿ ರಾಜಕಾರಣ ಮಾಡುವುದಿಲ್ಲ ಎಂದು ಪರೋಕ್ಷವಾಗಿ ಸಿ.ಪಿ.ಯೋಗೀಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮಗಳನ್ನು ನೆರವೇರಿಸಲು ನಾಳೆ ಚನ್ನಪಟ್ಟಣಕ್ಕೆ ಬರುತ್ತಿದ್ದಾರೆ. ರಾಮನಗರ ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳಿಗೆ ಅತೀ ಹೆಚ್ಚಿನ ಅನುದಾನವನ್ನು ನೀಡಿದ್ದಾರೆ. ಈಗಾಗಲೆ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಶಿವಕುಮಾರ್ ಹೇಳಿದರು.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಗೂ ನೆಹರು-ಗಾಂಧಿ ಕುಟುಂಬಕ್ಕೂ ಗಾಢ ಸಂಬಂಧವಿದೆ. ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಶೃಂಗೇರಿಗೆ ಹಲವು ಬಾರಿ ಭೇಟಿ ನೀಡಿದ್ದಾರೆ. ಈಗ ಅವರ ಪುತ್ರ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಭೇಟಿ ನೀಡಲು ಉದ್ದೇಶಿಸಿರುವುದರಲ್ಲಿ ಯಾವುದೆ ವಿಶೇಷತೆ ಇಲ್ಲ ಎಂದು ಶಿವಕುಮಾರ್ ತಿಳಿಸಿದರು.
ಕೂಡ್ಲಿಗಿ ಕ್ಷೇತ್ರದ ಶಾಸಕ ನಾಗೇಂದ್ರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲು ಆಸಕ್ತಿ ತೋರಿರುವುದು ನಿಜಕ್ಕೂ ಸಂತೋಷದ ವಿಚಾರ. ಅವರು ಕಾಂಗ್ರೆಸ್ ಸೇರಿದರೆ ಪಕ್ಷದ ಶಕ್ತಿ ಮತ್ತಷ್ಟು ಹೆಚ್ಚುತ್ತದೆ. ನನಗೆ ಆತ್ಮೀಯರಾಗಿರುವ ನಾಗೇಂದ್ರರನ್ನು ಪಕ್ಷಕ್ಕೆ ಸ್ವಾಗತಿಸುತ್ತೇನೆ ಎಂದು ಅವರು ಹೇಳಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನರ ಆಶೀರ್ವಾದದಿಂದ ಮತ್ತೊಮ್ಮೆ ನಾವು ಅಧಿಕಾರಕ್ಕೆ ಬರುತ್ತೇವೆ. ಈ ಬಗ್ಗೆ ಯಾರಿಗೂ ಅನುಮಾನವೇ ಬೇಡ. ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೆ ಈ ವಿಚಾರದಲ್ಲಿ ಸಮೀಕ್ಷೆ ಮಾಡಿಸಿದ್ದು, ಪಕ್ಷದ ವತಿಯಿಂದಲೂ ಮಾಡಿರುವ ಸಮೀಕ್ಷೆಯಲ್ಲಿ ನಮ್ಮ ಪರವಾದ ಒಲವಿರುವುದು ಕಂಡು ಬಂದಿದೆ. ಹೀಗಾಗಿ ನಾವು ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.







