240 ನಿಖರ ನಿರ್ದೇಶಿತ ಬಾಂಬ್ ಮತ್ತು 131 ಬರಾಕ್ ಕ್ಷಿಪಣಿ ಖರೀದಿಗೆ ಒಪ್ಪಿಗೆ

ಹೊಸದಿಲ್ಲಿ,ಜ.2: ಒಟ್ಟು 1,714 ಕೋ.ರೂ.ವೆಚ್ಚದಲ್ಲಿ ಭಾರತೀಯ ವಾಯುಪಡೆಗಾಗಿ 240 ನಿಖರ ನಿರ್ದೇಶಿತ ಬಾಂಬ್(ಪಿಜಿಬಿ) ಮತ್ತು ನೌಕಾಪಡೆಗಾಗಿ 131 ಬರಾಕ್ ಕ್ಷಿಪಣಿಗಳ ಖರೀದಿಗೆ ಸರಕಾರವು ಮಂಗಳವಾರ ಅನುಮತಿಯನ್ನು ನೀಡಿದೆ.
ಇವೆರಡೂ ಖರೀದಿ ಪ್ರಸ್ತಾವಗಳಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಸಿರು ನಿಶಾನೆ ತೋರಿಸಿದ್ದಾರೆ ಎಂದು ರಕ್ಷಣಾ ಸಚಿವಾಲಯವು ಹೇಳಿಕೆ ಯೊಂದರಲ್ಲಿ ತಿಳಿಸಿದೆ.
ನಿಖರ ನಿರ್ದೇಶಿತ ಯುದ್ಧಶಸ್ತ್ರಾಸ್ತ್ರಗಳ ವರ್ಗದಲ್ಲಿ ಬರುವ ಬಾಂಬ್‌ಗಳನ್ನು 1,254 ಕೋ.ರೂ.ವೆಚ್ಚದಲ್ಲಿ ರಷ್ಯದ ಜೆಎಸ್‌ಸಿ ರೋಸನ್‌ಬರನ್ ಎಕ್ಸ್‌ಪೋರ್ಟ್ಸ್‌ನಿಂದ ಖರೀದಿಸಲಾಗುತ್ತಿದ್ದು, ಇದು ವಾಯುಪಡೆಯ ದಾಳಿ ಸಾಮರ್ಥ್ಯವನ್ನು ಹೆಚ್ಚಿಸುವ ಜೊತೆಗೆ ಪಿಜಿಬಿಗಳ ಕೊರತೆಯು ನೀಗಿಸಲಿದೆ. 131 ಬರಾಕ್ ಕ್ಷಿಪಣಿಗಳು ಮತ್ತು ಸಂಬಂಧಿತ ಉಪಕರಣಗಳನ್ನು 460 ಕೋ.ರೂ.ವೆಚ್ಚದಲ್ಲಿ ಇಸ್ರೇಲ್‌ನ ರಫಾಯೆಲ್ ಅಡ್ವಾನ್ಸ್ ಡಿಫೆನ್ಸ್ ಸಿಸ್ಟಮ್ಸ್‌ನಿಂದ ಖರೀದಿಸಲಾಗುತ್ತದೆ. ಇದು ಭೂಮಿಯಿಂದ ಆಗಸಕ್ಕೆ ಚಿಮ್ಮುವ ಕ್ಷಿಪಣಿಯಾಗಿದ್ದು, ಹಡಗು ನಿರೋಧಿ ಕ್ಷಿಪಣಿಗಳ ವಿರುದ್ಧ ಕ್ಷಿಪಣಿ ನಿರೋಧಕ ರಕ್ಷಣಾ ವ್ಯವಸ್ಥೆಯಾಗಿ ಬಳಸಲು ವಿನ್ಯಾಸಗೊಂಡಿದೆ ಎಂದು ಅದು ತಿಳಿಸಿದೆ.