ತಂದೆ, ತಾಯಿಯನ್ನು ಗುಂಡಿಟ್ಟು ಕೊಂದ ಪುತ್ರ!

ರಾಯ್‌ಪುರ, ಜ.2: ಛತ್ತೀಸ್‌ಘಡದ ದುರ್ಗ ಜಿಲ್ಲೆಯಲ್ಲಿ ತನ್ನ ಹೆತ್ತವರನ್ನೇ ಗುಂಡಿಟ್ಟು ಹತ್ಯೆ ಮಾಡಿದ ಆರೋಪದಲ್ಲಿ 42ರ ಹರೆಯದ ವ್ಯಕ್ತಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ನಾಗ್ಪುರದಲ್ಲಿ ಖ್ಯಾತ ಜೈನ ದೇವಾಲಯದ ಮೊಕ್ತೇಸರರಾಗಿದ್ದ ರವಲ್ಮಲ್ ಜೈನ್ (72) ಮತ್ತು ಅವರ ಪತ್ನಿ ಸುರ್ಜಿಬಾಯಿ ಜೈನ್ (67) ರನ್ನು ಅವರದ್ದೇ ಮಗನಾದ ಸಂದೀಪ್ ಜೈನ್ ಎಂಬಾತ ಗುಂಡು ಹಾರಿಸಿ ಹತ್ಯೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಗಂಜ್‌ಪರ ಪ್ರದೇಶದ ನಿವಾಸಿಯಾಗಿದ್ದ ರವಲ್ಮಲ್ ಜೈನ್ ಖ್ಯಾತ ಉದ್ಯಮಿ ಮತ್ತು ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದು ದುರ್ಗ ಜಿಲ್ಲೆಯ ನಾಗ್ಪುರದಲ್ಲಿರುವ ಪಾರ್ಶ್ವನಾಥ್ ಜೈನತೀರ್ಥ ದೇವಾಲಯದ ಮೊಕ್ತೇಸರರ ಪೈಕಿ ಒಬ್ಬರಾಗಿದ್ದರು.
ತನಿಖೆಯ ವೇಳೆ ಸಂದೀಪ್ ಕೂಡಾ ಘಟನೆ ನಡೆದ ಸ್ಥಳದಲ್ಲಿ ಇದ್ದುದಾಗಿ ತಿಳಿದುಬಂದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡ ಆತ ತನ್ನ ಹೆತ್ತವರನ್ನು ಹತ್ಯೆ ಮಾಡಿರುವುದನ್ನು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರತಿದಿನ ಮನೆಯಲ್ಲಿ ಮಾಡುತ್ತಿದ್ದ ಪೂಜಾ ಸಂಪ್ರದಾಯಗಳ ಬಗ್ಗೆ ಸಂದೀಪ್ ಮತ್ತಾತನ ತಂದೆಗೆ ಹಲವು ಬಾರಿ ಜಗಳಗಳು ನಡೆದಿದ್ದವು. ಅದಲ್ಲದೆ ಇತರ ಹಲವು ವಿಷಯಗಳಲ್ಲೂ ತಂದೆ ಮತ್ತು ಮಗನಿಗೆ ಮನೆಯಲ್ಲಿ ಜಗಳ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಬೆಳಿಗ್ಗೆ ರವಲ್ಮಲ್ ಸ್ನಾನಕ್ಕೆಂದು ತೆರಳುತ್ತಿದ್ದ ವೇಳೆ ಎದುರಿಗೆ ಬಂದ ಆರೋಪಿ ಅವರ ಮೇಲೆ ಎರಡು ಬಾರಿ ಗುಂಡು ಹಾರಿಸಿದ್ದಾನೆ. ಜೊತೆಗೆ ತನ್ನ ತಾಯಿಯ ಮೇಲೂ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹತ್ಯೆಗೆ ಬಳಸಲ್ಪಟ್ಟ ಪಿಸ್ತೂಲನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ರವಲ್ಮಲ್ ಮತ್ತವರ ತಾಯಿಯ ಸಾವಿಗೆ ಛತ್ತೀಸ್‌ಘಡ ಮುಖ್ಯಮಂತ್ರಿ ರಮಣ ಸಿಂಗ್ ಸಂತಾಪ ಸೂಚಿಸಿದ್ದಾರೆ. ಛತ್ತೀಸ್‌ಘಡದಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಗೆ ಪ್ರೋತ್ಸಾಹ ನೀಡುವ ಮೂಲಕ ಆದರ್ಶದಾಯಕ ಕಾರ್ಯಗಳನ್ನು ಮಾಡಿದ್ದರು. ಅವರು ರಾಜ್ಯದಲ್ಲಿ ಪ್ರಕೃತಿ ಚಿಕಿತ್ಸೆ ಕಾಲೇಜನ್ನು ಆರಂಭಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂದು ಸಿಂಗ್ ತಿಳಿಸಿದ್ದಾರೆ.