ಸುವರ್ಣ ಗ್ರಾಮ ಯೋಜನೆಗೆ 5.75 ಕೋಟಿ ರೂ. ಬಿಡುಗಡೆ: ವೈ.ಎಸ್.ವಿ. ದತ್ತ

ಕಡೂರು, ಜ.2: ಕಡೂರು ವಿಧಾನಸಭಾ ಕ್ಷೇತ್ರಗಳ ಹಲವಾರು ಗ್ರಾಮಗಳ ಅಭಿವೃದ್ಧಿಗಾಗಿ ಸುವರ್ಣ ಗ್ರಾಮ ಯೋಜನೆಯಡಿಯಲ್ಲಿ 5.75 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಈ ಅನುದಾನದಲ್ಲಿ ತಂಗಲಿ ಗ್ರಾಮಕ್ಕೆ ರಸ್ತೆ ಚರಂಡಿ ಅಭಿವೃದ್ಧಿಗಾಗಿ 15 ಲಕ್ಷ ರೂಗಳನ್ನು ನೀಡಲಾಗಿದೆ ಎಂದು ಶಾಸಕ ವೈ.ಎಸ್.ವಿ. ದತ್ತಾರವರು ತಿಳಿಸಿದರು.
ಅವರು ತಂಗಲಿ ಗ್ರಾಮದ ಗಂಗೆಮತಸ್ತ ಸಮಾಜದ ವತಿಯಿಂದ ಸನ್ಮಾನವನ್ನು ಸ್ವೀಕರಿಸಿ, ಗಂಗಾ ಪರಮೇಶ್ವರಿ ಸಮುದಾಯ ಭವನದ ಮುಂಭಾಗದಲ್ಲಿ ಏರ್ಪಡಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ ಹಲವಾರು ಸಣ್ಣಪುಟ್ಟ ಸಮುದಾಯಗಳು ಕ್ಷೇತ್ರದಲ್ಲಿದ್ದು, ಅವರುಗಳನ್ನು ಗುರುತಿಸಿ ಶಕ್ತಿ ತುಂಬುವ ಕಾರ್ಯವನ್ನು ಇಡೀ ಕ್ಷೇತ್ರದಲ್ಲಿ ಮಾಡಲಾಗಿದೆ. ದೇವಾಂಗ, ಗಂಗೆಮತಸ್ತ, ಯಾದವರು, ಉಪವೀರರು ಮುಂತಾದ ಸಮಾಜದ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಹೇಳಿದರು.
ಕಡೂರು ಪಟ್ಟಣದ ಬನಶಂಕರಿ ದೇವಾಲಯಕ್ಕೆ 5 ಲಕ್ಷ ರೂ, ಗರ್ಜೆ ದೇವಾಂಗ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ 10 ಲಕ್ಷ ರೂ, ತಂಗಲಿ ಗಂಗೆಮತಸ್ತ ಸಮಾಜದ ಸಮುದಾಯ ಭವನಕ್ಕೆ 10 ಲಕ್ಷ ರೂ, ಅನುದಾನ ನೀಡಲಾಗಿದೆ. ಈ ಸಮುದಾಯ ಭವನದ ಕಾಮಗಾರಿಯು ಒಂದು ತಿಂಗಳಲ್ಲಿ ಮುಕ್ತಾಯಗೊಂಡು ಉದ್ಘಾಟನೆಗೆ ಸಿದ್ಧವಾಗಿದೆ. ತಂಗಲಿ ಗ್ರಾಮ ಇತಿಹಾಸ ಪ್ರಸಿದ್ಧವಾದುದು. ಈ ಗ್ರಾಮದಲ್ಲಿ ಅನೇಕ ಅಯ್ಯಂಗಾರ್ ಕುಟುಂಬಗಳು ವಾಸವಾಗಿದ್ದರು. ಅವರುಗಳು ದಾನಿಗಳಾಗಿದ್ದರು. ಅಯ್ಯಂಗಾರ್ ಕುಟುಂಬಗಳ ಕೊಡುಗೆ ಕಡೂರು ತಾಲ್ಲೂಕಿಗೆ ಅಪಾರವಾಗಿದೆ. ತಂಗಲಿ ಗ್ರಾಮದ ಲಕ್ಷ್ಮಿ ದೇವಾಲಯದ ಜೀರ್ಣೋದ್ಧಾರಕ್ಕೆ ಮುಂದಿನ ದಿನಗಳಲ್ಲಿ ಅನುದಾನವನ್ನು ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭಂಡಾರಿ ಶ್ರೀನಿವಾಸ್, ಮಂಜುನಾಥಪ್ರಸನ್ನ, ಡಿ.ಮಂಜುನಾಥ್, ಗ್ರಾಪಂ ಅಧ್ಯಕ್ಷೆ ಪವಿತ್ರಾ ಸತೀಶ್, ಮುಖಂಡರಾದ ಬಸವರಾಜ್, ರವಿಕುಮಾರ್, ಕೃಷ್ಣಪ್ಪ, ಶ್ರೀನಿವಾಸ್, ಧನಪಾಲನಾಯ್ಕ, ಕೆಂಚಪ್ಪ, ಸುರೇಶ್, ನಾರಾಯಣಪ್ಪ ಉಪಸ್ಥಿತರಿದ್ದರು.







